ಕೇಂದ್ರ ಬಜೆಟ್‌ಗೆ ಕಾಫಿ ಕ್ಷೇತ್ರದ 15 ಅಂಶ
ಮೂಡಿಗೆರೆ: ಕೇಂದ್ರದ ಎನ್‌ಡಿಎ ಸರ್ಕಾರದ ಮುಂದಿನ ಬಜೆಟ್‌ಗೆ ಕಾಫಿ ಕ್ಷೇತ್ರದಲ್ಲಿ 15 ಅಂಶಗಳನ್ನು ನೀಡಲಾಗಿದೆ ಎಂದು ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಕೆಂಜಿಗೆ ಕೇಶವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ವಿವಿಧ ವಲಯಗಳ ಪ್ರತಿನಿಧಿಗಳ ಸಭೆ ನಡೆಸಿ ಬಜೆಟ್‌ನಲ್ಲಿ ಸೇರ್ಪಡೆಗೊಳಿಸಬೇಕಾದ ಕಾಫಿ ಕ್ಷೇತ್ರದ ಬಗ್ಗೆ ಮಾಹಿತಿ ಪಡೆದಿದ್ದು, 15 ಅಂಶಗಳನ್ನು ಕಳುಹಿಸಿ ಕೊಡಲಾಗಿದೆ ಎಂದರು.
ಕಾಫಿ ಬೆಳೆಯ ಬೋರಾರ್ ಸಮಸ್ಯೆ, ಕಾಫಿ ಕ್ಯೂರಿಂಗ್‌ನಲ್ಲಿ ಆಧುನಿಕ ತಂತ್ರಜ್ಞಾನದ ಸಂಶೋಧನೆ, ಮಾರುಕಟ್ಟೆ, ಕಾಫಿ ವಲಯಕ್ಕೆ ದೇಶಿಯ ಯಂತ್ರೋಪಕರಣ ತಯಾರಿಕೆ, ಶೇ.3ರ ಬಡ್ಡಿ ದರದಲ್ಲಿ 10 ಲಕ್ಷದವರಗೆ ಬೆಳೆ ಸಾಲ, ವಿವಿಧ ಯೋಜನೆಗಳಲ್ಲಿ ಸ್ಥಗಿತಗೊಂಡಿರುವ ರೈತರ ಸಾಲ ಯೋಜನೆಗಳ ಮರುನವೀಕರಣ, ಇನಾಂಭೂಮಿ ಸಮಸ್ಯೆ, ಕಸ್ತೂರಿ ರಂಗನ್ ವರದಿ, ಗಾಡ್ಗಿಲ್ ವರದಿ, ಒತ್ತುವರಿ ಸಮಸ್ಯೆ, ಪ್ರಾಣಿ ಹಾವಳಿ ಸಮಸ್ಯೆ ಪರಿಹಾರಕ್ಕೆ ಕ್ರಮ, ತಮಿಳುನಾಡಿನ ನೀರಾ ಮಾದರಿಯಲ್ಲಿ ಕಾಫಿ ಮತ್ತು ಉಪಬೆಳೆಗಳ ವೈನ್ ತಯಾರಿಕೆಗೆ ಅನುಮತಿ, ಕಾಫಿ ವಲಯದಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ, ಸ್ಥಳಿಯವಾಗಿ ರಸಾಯನಿಕ ಗೊಬ್ಬರ ತಯಾರಿಕೆಗೆ ಕೈಗಾರಿಕೆ ಸ್ಥಾಪನೆ, ಕಾಫಿ ಮಂಡಳಿಯಲ್ಲಿ 12ನೇ ಪಂಚವಾರ್ಷಿಕ ಯೋಜನೆಯಡಿ ಬಾಕಿ ಉಳಿದಿರುವ 697 ಕೋಟಿ ಸಹಾಯಧನ ಬಿಡುಗಡೆ, 8 ದಿನಗಳ ಮೊದಲೇ ಸ್ಥಳಿಯ ರೈತರಿಗೆ ಮಾಹಿತಿ ನೀಡುವ ಹವಾಮಾನ ಕೇಂದ್ರ ಸ್ಥಾಪನೆ, ಬೆಲೆ ಮಾರುಕಟ್ಟೆ ಮಾಹಿತಿ ಪಡೆಯಲು ಇಂಟರ್ನೆಟ್ ಸೌಲಭ್ಯ, ಗೊಬ್ಬರ ಔಷಧೋಪಚಾರಗಳ ಗುಣಮಟ್ಟ ಪರಿಶೀಲನೆಗೆ ಸ್ಥಳಿಯವಾಗಿ ಸರ್ಕಾರಿ ಪ್ರಯೋಗಾಲಯ ಸ್ಥಾಪನೆ, ಕಾರ್ಮಿಕ ವರ್ಗಕ್ಕೆ ಆರೋಗ್ಯ ಸೇವೆಗಾಗಿ ಇಎಸ್‌ಐ ಮಾದರಿ ಆಸ್ಪತ್ರೆ ನಿರ್ಮಾಣ, ಕಾರ್ಮಿಕರಿಗೆ ನಿವೇಶನ ಮತ್ತು ವಸತಿ ಸೌಲಭ್ಯ, ವಿವಿಧ ಕೃಷಿ ಬೋರ್ಡ್‌ಗಳಿಗೆ ಬೆಳೆಗಾರ ಪ್ರತಿನಿಧಿಗಳನ್ನೇ ಅಧ್ಯಕ್ಷರನ್ನಾಗಿ ಮಾಡುವುದರೊಂದಿಗೆ, ಕಾಳು ಮೆಣಸಿಗೆ ಪ್ರತ್ಯೇಕ ಮಂಡಲಿ ರಚನೆ, ಸ್ಥಳಿಯ ಮಟ್ಟದಲ್ಲಿ ರೈನ್ ಗೇಜ್ ಸ್ಥಾಪನೆ ಮಾಡುವಂತಹ ಅಂಶಗಳನ್ನು ಸೇರಿಸಲಾಗಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಸಿ.ಸುದರ್ಶನ್, ತಾಲೂಕು ವಕ್ತಾರ ವಿನೋದ್ ಕಣಚೂರು, ದೇವರುಂದ ದಿನೇಶ್ ಉಪಸ್ಥಿತರಿದ್ದರು.