ರಾಜ್ಯ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ಅನುದಾನಕ್ಕೆ ಪ್ರಯತ್ನ
ಬಾಳೆಹೊನ್ನೂರು: ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ದೊರಕಿಸಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರೇಲ್ವೆ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.
ಸೋಮವಾರ ಶೃಂಗೇರಿಗೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಜೇಸಿ ವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಲಿದ್ದು, ಪ್ರತಿಯೊಂದು ಅನುದಾನವೂ ಹೆಚ್ಚಿನ ರೀತಿಯಲ್ಲಿ ದೊರೆಯುವಂತೆ ಮಾಡಲಾಗುವುದು ಎಂದರು.
ರೇಲ್ವೆ ಇಲಾಖೆಯಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಲು ಹೊಸ ಮಾರ್ಗೋಪಾಯ ಕಂಡುಹಿಡಿದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಯಶಸ್ಸು ಕಂಡುಕೊಳ್ಳಲಾಗುವುದು. ಮಲೆನಾಡು ಭಾಗಕ್ಕೆ ಹಾಗೂ ಪ್ರಸಿದ್ಧ ಯಾತ್ರಾ ಸ್ಥಳ ಶೃಂಗೇರಿಗೆ ರೇಲ್ವೆ ಸಂಪರ್ಕ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರೇಲ್ವೆ ಇಲಾಖೆಯ ಉದ್ಯೋಗ ನೇಮಕಾತಿಯಲ್ಲಿ ಕನ್ನಡಿಗರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಂಡು, ರಾಜ್ಯಕ್ಕೆ ಹೆಚ್ಚಿನ ಮೀಸಲಾತಿ ನೀಡಲಾಗುವುದು ಎಂದ ಅವರು, ಮಲೆನಾಡಿನ ಪ್ರಮುಖ ಒತ್ತುವರಿ ಸಮಸ್ಯೆ, ಅಡಕೆ ಹಳದಿ ಎಲೆ ರೋಗ, ಇನಾಂ ಭೂಮಿ ಸಮಸ್ಯೆ ಹಾಗೂ ಬಯಲುಸೀಮೆಯ ಎಲ್ಲಾ ಸಮಸ್ಯೆಗಳಿಗೂ ಸಹ ಪರಿಹಾರ ದೊರಕಿಸುವಲ್ಲಿ ಕೇಂದ್ರ ಸರ್ಕಾರ ಹಾಗೂ ತಾವು ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತೇವೆ ಎಂದು ನುಡಿದರು.
ಕೇಂದ್ರ ರೇಲ್ವೆ ಮಂತ್ರಿಯಾದ ಬಳಿಕ ಪಟ್ಟಣಕ್ಕೆ ಮೊದಲ ಸಲ ಭೇಟಿ ನೀಡಿದ ಸಚಿವರಿಗೆ ಬಿಜೆಪಿ ಕಾರ್ಯಕರ್ತರು ಸ್ವಾಗತ ನೀಡಿದರು. ನರಸಿಂಹರಾಜಪುರ ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್, ಶೃಂಗೇರಿ ಕ್ಷೇತ್ರ ರೈತ ಮೋರ್ಚಾ ಅಧ್ಯಕ್ಷ ಕೆ.ಟಿ. ವೆಂಕಟೇಶ್, ಬಿಜೆಪಿ ಮುಖಂಡ ಪ್ರಭಾಕರ್ ಇದ್ದರು.