ರುಬ್ಬು ಗುಂಡು ಎತ್ತಿ ಹಾಕಿ ಪತ್ನಿಯಿಂದ ಪತಿ ಕೊಲೆ
ಚಿಕ್ಕಮಗಳೂರು: ಶೀಲದ ಬಗ್ಗೆ ಅನುಮಾನಗೊಂಡು ಕಿರುಕುಳ ನೀಡುತ್ತಿದ್ದ ಪತಿಯ ಮೇಲೆ ಪತ್ನಿ ರುಬ್ಬುವ ಗುಂಡು ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಮಾರುತಿ ಮೃತಪಟ್ಟ ವ್ಯಕ್ತಿ.
ಪ್ರೇಮ ಹಾಗೂ ಮಾರುತಿ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದು, ಮಾರುತಿ ಕುಡಿದು ಬಂದು ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ.
ಈ ವಿಚಾರವಾಗಿ ಹಲವು ಬಾರಿ ಅವರಿಗೆ ಬುದ್ಧಿವಾದ ಹೇಳಿದ್ದರೂ ಆತ ಹೆಂಡತಿಯ ಶೀಲದ ಬಗ್ಗೆ ಅನುಮಾನಗೊಂಡು ಕಿರುಕುಳ ನೀಡುತ್ತಿದ್ದ. ಭಾನುವಾರ ಮಾರುತಿ ಮತ್ತೆ ಗಲಾಟೆ ಮಾಡುತ್ತಿದ್ದ ವೇಳೆಯಲ್ಲಿ ಪ್ರೇಮಾ ಪತಿಯ ಮೇಲೆ ರುಬ್ಬುವ ಗುಂಡು ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಬಾಳೂರು ಪೊಲೀಸರು ಪ್ರೇಮಾ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಿದ್ದಾರೆ.