ಚಿಕ್ಕಮಗಳೂರು: ಹಣಕ್ಕಾಗಿ ಕೂದಲು ವ್ಯಾಪಾರಿ ಅಪಹರಣ
ಚಿಕ್ಕಮಗಳೂರು: ಹಣಕ್ಕಾಗಿ ವ್ಯಕ್ತಿಯೋರ್ವರನ್ನು ಅಪಹರಿಸಿರುವ ಘಟನೆ ತರೀಕೆರೆ ತಾಲೂಕಿನ ಬೇಲೇನಹಳ್ಳಿ ಬಳಿ ಭಾನುವಾರ ನಡೆದಿರುವ ತಡವಾಗಿ ಬೆಳಕಿಗೆ ಬಂದಿದೆ.
ಬೇಲೇನಹಳ್ಳಿಯ ನಿವಾಸಿ ಮಹೇಂದ್ರ ಎಂಬವರು ಜೂ.15ರಂದು ಬೆಳಗ್ಗೆ ಕೂದಲು ವ್ಯಾಪಾರಕ್ಕಾಗಿ ತಮ್ಮ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಗುಂಪೊಂದು ಅವರನ್ನು ಅಪಹರಿಸಿತ್ತು. ನಂತರ ಮಹೇಂದ್ರ ಅವರ ಪತ್ನಿಗೆ ದೂರವಾಣಿಯಲ್ಲಿ ಕರೆ ಮಾಡಿ ತಾವು ಪೊಲೀಸರು ಎಂದು ಹೇಳಿ, ಅವರನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದೇವೆಂದು ತಿಳಿಸಿದ್ದಾರೆ.
ಬಳಿಕ ಸಂಜೆ ಮೊಬೈಲ್ಗೆ ಕರೆ ಮಾಡಿ, ಮಹೇಂದ್ರ ಅವರನ್ನು ತಾವು ಅಪಹರಿಸಿದ್ದು, ಅವರನ್ನು ಬಿಡುಗಡೆಗೊಳಿಸಲು 6 ಲಕ್ಷ ಕೊಡಬೇಕು. ಇಲ್ಲದಿದ್ದರೆ ಮಹೇಂದ್ರ ತಮಗೆ ಸಿಗುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ತರೀಕೆರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.