ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪಿಡಿಒ ಉಡಾಫೆ ಉತ್ತರ: ಬೇಸತ್ತ ಸದಸ್ಯರ ಸಭಾತ್ಯಾಗ ಅರ್ಧಕ್ಕೆ ನಿಂತುಹೋದ ಮಾಕೋನಹಳ್ಳಿ ಗ್ರಾಮ ಸಭೆ

Rashmi Kasaragodu
Updated On : 18 Jun 2014, 11:15 am

ಮೂಡಿಗೆರೆ: ತಾಲೂಕಿನ ಮಾಕೋನಹಳ್ಳಿ ಗ್ರಾಮಪಂಚಾಯಿತ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮಸಭೆ ಅರ್ಧಕ್ಕೆ ನಿಂತು ಹೋದ ಘಟನೆ ವರದಿಯಾಗಿದೆ.
ಮಾಕೋನಹಳ್ಳಿ ಗ್ರಾಮ ಪಂಚಾಯಿತ್‌ನಲ್ಲಿ 10 ಸದಸ್ಯರಿದ್ದು, 5 ಸದಸ್ಯರಿಗೆ ಜೂನ್ 16 ಸೋಮವಾರ ಮತ್ತು 17 ಮಂಗಳವಾರ ಸಮುದಾಯ ಭವನದಲ್ಲಿ ನಡೆಯುವ ವಾರ್ಡ್ ಹಾಗೂ ಗ್ರಾಮಸಭೆಗೆ ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ಸದಸ್ಯರನ್ನು ಆಹ್ವಾನಿಸದೇ ನಿರ್ಲಕ್ಷ್ಯ ವಹಿಸಿದ್ದರು. ಮತ್ತು ಗ್ರಾಮ ಸಭೆಯಲ್ಲಿ ಮಾಹಿತಿ ನೀಡಲು ನಿರಾಕರಿಸಿದ್ದರ ಹಿನ್ನಲೆಯಲ್ಲಿ 17 ಸೋಮವಾರ ಗ್ರಾಮಸಭೆ ಪೂರ್ಣಗೊಳ್ಳದೇ ಮೊಟಕಾಯಿತು.
ಮಂಗಳವಾರ ನಡೆದ ಗ್ರಾಮಸಭೆಯ ಅಧ್ಯಕ್ಷತೆಯನ್ನು ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಚಂದ್ರಮೌಳಿ ವಹಿಸಬೇಕಾಗಿತ್ತು. ಆದರೆ ಕಾರಣಾಂತರದಿಂದ ಅಸಿಸ್ಟೆಂಟ್ ಡೈರೆಕ್ಟರ್ ರಾಮಚಂದ್ರ ವಹಿಸಿದ್ದರು.
ಸಭೆ ಪ್ರಾರಂಭದಲ್ಲೇ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಜಗದೀಶ್ ಪಂಚಾಯಿತ್ ಅಭಿವೃದ್ಧಿ ಅಧಿಕಾರಿಗಳನ್ನು ಸೋಮವಾರ ಮತ್ತು ಮಂಗಳವಾರ ನಡೆದ ಸಭೆಗೆ ಎಷ್ಟು ಸದಸ್ಯರಿಗೆ ತಿಳಿಸಿದ್ದೀರಿ ಎಂದು ಪ್ರಶ್ನಿಸಿದಾಗ  ಅಧಿಕಾರಿ ಉಡಾಫೆ ಉತ್ತರ ನೀಡಿದ್ದರಿಂದ ಗೊಂದಲದ ವಾತವರಣ ನಿರ್ಮಾಣಗೊಂಡಿತು. ಮಾಜಿ ಅಧ್ಯಕ್ಷ ಎಂ.ಎನ್.ಅಶ್ವತ್ಥ್ ಫಲಾನುಭವಿಗಳ ಸಂಪೂರ್ಣ ವಿವರಣೆ ನೀಡುವಂತೆ ಪಂಚಾಯಿತ್ ಅಭಿವೃದ್ಧಿ ಅಧಿಕಾರಿಗಳನ್ನು ಕೇಳಿದಾಗ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಉತ್ತರ ನೀಡಿದರು.
ಮಾಜಿ ಗ್ರಾಪಂ ಉಪಾಧ್ಯಕ್ಷರು ಹಾಲಿ ಕೃಷಿ ಪರಿಷತ್ ಸದಸ್ಯ ಎಂ.ಎಲ್.ಕಲ್ಲೇಶ್ ಮಾಹಿತಿ ಇಲ್ಲದೆ ಗ್ರಾಮ ಸಭೆಯನ್ನು ನಡೆಸುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.
ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ಜಲಾನಯನ ಇಲಾಖೆಯ ಯಾವುದೇ ಮಾಹಿತಿ ನೀಡಬೇಕೆಂಬ ನಿಯಮವೇನು ಇಲ್ಲಾ ಎಂದು ಹೇಳಿದರು. ಸದಸ್ಯ ಶಿವಮೂರ್ತಿ, ಜಗದೀಶ್, ನಾರಾಯಣ್ ಪ್ರಶ್ನೆಗಳ ಸುರಿಮಳೆ ಸುರಿಸಿದಾಗ ಉತ್ತರ ನೀಡುವಲ್ಲಿ ಅಧಿಕಾರಿ ಅಸಮರ್ಥರಾದ್ದರಿಂದ ಗ್ರಾಮಸಭೆಗೆ ಆಗಮಿಸಿದ್ದ ಸಾರ್ವಜನಿಕರು ಮತ್ತು ಸದಸ್ಯರು ಉತ್ತರ ನೀಡಲು ಸಾಧ್ಯವಾಗದಿದ್ದ ಮೇಲೆ ಸಭೆಯ ಅವಶ್ಯಕತೆ ಇಲ್ಲ ಎಂದು ಸಭೆಯಿಂದ ಎದ್ದು ಹೊರನಡೆದರು.
ಉಡಾಫೆ ಹಾಗೂ ಮಾಹಿತಿ ನೀಡಲು ನಿರಾಕರಿಸಿದ ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ದೂರು ನೀಡುವುದಾಗಿ ಪಂಚಾಯಿತ್ ಸದಸ್ಯರು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement