ಸವಲತ್ತಿಗೆ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ
ಕಡೂರು: ಕಿವುಡ ಹಾಗೂ ಮೂಗರಿಗೆ ಸರ್ಕಾರದಿಂದ ಸಿಗಬೇಕಾಗಿರುವ ಸವಲತ್ತು ನೀಡುವಂತೆ ಬೆಂಗಳೂರಿಗೆ ಪಾದಯಾತ್ರೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಕಿವುಡ ಮೂಗರ ಜಿಲ್ಲಾ ಸಂಘದ ಗೌರವಾಧ್ಯಕ್ಷ ಕೆ.ಎಚ್. ಶಂಕರ್ ಹೇಳಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸಂಘದ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಡೂರಿನಲ್ಲಿ ಈಗಾಗಲೇ ಜಿಲ್ಲಾಮಟ್ಟದ ಕಿವುಡ ಮೂಗರ ಸಂಘ ಅಸ್ಥಿತ್ವದಲ್ಲಿದೆ. ಕಚೇರಿ ಕೂಡ ಹೊಂದಿದೆ. 2010 ರಿಂದ ಸಂಘಟನೆಯು ಬಲಗೊಳ್ಳುತ್ತಿದೆ. ಇದುವರೆಗೂ ಜಿಲ್ಲಾದ್ಯಂತ 176 ಕಿವುಡ ಮತ್ತು ಮೂಗರು ಹೆಸರು ನೋಂದಾಯಿಸಿಕೊಂಡು ಸಂಘದ ಗುರುತಿನ ಚೀಟಿ ಪಡೆದಿದ್ದಾರೆ. ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅನೇಕ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ರಾಜ್ಯ ಸರ್ಕಾರವು ಇವರಿಗೆ ನೀಡುತ್ತಿರುವ 500 ರಿಂದ 1200 ರವರೆಗಿನ ಮಾಸಿಕ ವೇತನ ಯಾವುದಕ್ಕೂ ಸಾಲದು. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಸಂಘದ ಮುಖೇನ ಚಿಕ್ಕಮಗಳೂರು ಜಿಲ್ಲಾ ಕ್ಷೇತ್ರದಿಂದ ರಾಜಧಾನಿ ಬೆಂಗಳೂರಿಗೆ ಪಾದಯಾತ್ರೆ ಮಾಡುವ ಮೂಲಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಸಂಘದ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದರು. ಸಂಘದ ಅಧ್ಯಕ್ಷ ಸ್ವಾಮಿ ಮಾತನಾಡಿದರು.
ಆಯ್ಕೆ: ಸಭೆಯಲ್ಲಿ ಸಂಘದ ಗೌರವಾಧ್ಯಕ್ಷರಾಗಿ ಕೆ.ಎಚ್. ಶಂಕರ್, ಅಧ್ಯಕ್ಷರಾಗಿ ಜಿ.ಎಸ್.ಸ್ವಾಮಿ, ಉಪಾಧ್ಯಕ್ಷ ಲೋಕನಾಯ್ಕ, ಕಾರ್ಯದರ್ಶಿ ಎಚ್.ಎಸ್. ದೇವರಾಜ್, ಸಹ ಕಾರ್ಯದರ್ಶಿ ಮಹಮದ್, ಖಜಾಂಚಿ ಎಚ್.ಟಿ. ವಿಜಯ್, ಸದಸ್ಯರಾಗಿ ಎಚ್.ಎಸ್. ವಿಶ್ವನಾಥ್, ಆರಿನ್, ಶ್ರೀನಿವಾಸ್, ಪೂರ್ಣೇಶ್, ಯಲ್ಲಪ್ಪ ಆಯ್ಕೆಯಾದರು. ಜಿಲ್ಲೆಯ ಅನೇಕ ಕಡೆಗಳಿಂದ ಕಿವುಡ ಮತ್ತು ಮೂಗರು ಸಭೆಗೆ ಆಗಮಿಸಿದ್ದರು.