ಹೊಸ್ಕೆರೆ ನಾದತರಂಗ ಕಾರ್ಯಕ್ರಮ 21ಕ್ಕೆ
ಶೃಂಗೇರಿ: ಪಟ್ಟಣದ ಡಾ.ಗೌರೀಶಂಕರ ಸಭಾಂಗಣದಲ್ಲಿ ಜೂನ್ 21 ರಂದು ಸಂಜೆ 5-30ಕ್ಕೆ ಹೊಸ್ಕೆರೆ ನಾದತರಂಗ, ಮನರಂಜನಾ ಕಾರ್ಯಕ್ರಮ ಹಾಗೂ ನವಗೀತ ಮಾಲ ಭಕ್ತಿಗೀತೆ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ನಡೆಯಲಿದೆ. ಡಾ.ಸಿ.ವಿ.ಗಿರಿಧರಶಾಸ್ತ್ರಿ ಹೊಸ್ಕೆರೆ ವೆಂಕಟೇಶ್, ಎಂ.ನಾಗರಾವ್ ಕಲ್ಕಟ್ಟೆ ಸಂಗೀತದ ಸಿಡಿ ಬಿಡುಗಡೆ ಮಾಡಲಿದ್ದಾರೆ. ಪಪಂ ಅಧ್ಯಕ್ಷೆ ಶೋಭಾ ಅನಂತಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಕ್ಕಮಗಳೂರಿನ ಶ್ರೀಕಂಠ ಭಟ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಸೂಡಾ ಹಗರಣ ಸಿಬಿಐಗೆ ವಹಿಸಲು ಆಗ್ರಹ
ಶಿವಮೊಗ್ಗ: ಸೂಡಾ ನಿವೇಶನ ಹಗರಣವನ್ನು ಸಿಬಿಐಗೆ ವಹಿಸಲು ಕ್ರಮ ಕೈಗೊಳ್ಳುವಂತೆ ಅಣ್ಣಾ ಹಜಾರೆ ಹೋರಾಟ ಸಮಿತಿ ಹಾಗೂ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದೆ. ಮಂಗಳವಾರ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ಮನವಿ ಸಲ್ಲಿಸಿದ ಸಂಘಟನೆ ಸದಸ್ಯರು, ಸೂಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆಸಿರುವ ತಪ್ಪಿತಸ್ಥರ ವಿರುದ್ಧ ಮೊದಲು ಎಫ್‌ಐಆರ್ ದಾಖಲಿಸಬೇಕೆಂದೂ ಸಹ ಒತ್ತಾಯಿಸಿದರು.