ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಿಲ್ಲೆಯ ಕೆರೆಗಳ ಒತ್ತುವರಿ ಶೀಘ್ರವೇ ತೆರವುಗೊಳಿಸಿ

Rashmi Kasaragodu
Updated On : 19 Jun 2014, 11:45 am

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆಗಿರುವ ಕೆರೆಗಳ ಒತ್ತುವರಿಯನ್ನು ಆದಷ್ಟು ಶೀಘ್ರದಲ್ಲಿ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವ್ಯಾಪ್ತಿಯಲ್ಲಿ 1765 ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 72 ಕೆರೆಗಳಿದ್ದು, ಇವುಗಳಲ್ಲಿ ಒತ್ತುವರಿಯಾಗಿರುವ ಪ್ರದೇಶವನ್ನು ಆದಷ್ಟು ಶೀಘ್ರದಲ್ಲಿ ಪಂಚಾಯತ್ ರಾಜ್ ಇಲಾಖೆಯವರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯದೊಂದಿಗೆ ತೆರವುಗೊಳಿಸಿ ಬೇಲಿ ಹಾಕಿಸಬೇಕೆಂದು ತಿಳಿಸಿದರು.
ಸ್ಮಶಾನಕ್ಕೆ ಮೀಸಲಿರಿಸಿರುವ ಜಾಗಗಳನ್ನು ಗುರುತಿಸಿ ಅತಿಕ್ರಮಣವಿದ್ದರೆ ಅವುಗಳನ್ನು ಖುಲ್ಲಾಗೊಳಿಸಿ ಅವುಗಳಿಗೂ ಬೇಲಿ ನಿರ್ಮಾಣ ಮಾಡಬೇಕು ಎಂದು ತಹಸೀಲ್ದಾರ್‌ರಿಗೆ ತಿಳಿಸಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿವೇಶನ ವಂಚಿತರಿಗೆ ನಿವೇಶನ ನೀಡಲು ಆಶ್ರಯ ಯೋಜನೆಯಡಿಯಲ್ಲಿ ಜಮೀನುಗಳನ್ನು ಗುರುತಿಸಬೇಕೆಂದು ಹೇಳಿದ ಜಿಲ್ಲಾಧಿಕಾರಿ, ಸಾಮಾಜಿಕ ಭದ್ರತೆಯ ಯೋಜನೆಗೆ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಆರ್ಥಿಕ ಸೌಲಭ್ಯ ಒದಗಿಸಬೇಕೆಂದು ಹೇಳಿದರು.
ಆಧಾರ್ ನೋಂದಣಿ ಕಾರ್ಯ ಚುರುಕು:  ಸಕಾಲ ಅಡಿಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ವಿಳಂಬವಿಲ್ಲದೆ ನಿಗಧಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು. ಜಿಲ್ಲೆಯಲ್ಲಿ ಈಗಾಗಲೇ ಕೈಗೊಳ್ಳಲಾಗಿರುವ ಆಧಾರ್ ನೋಂದಣಿ ಕಾರ್ಯವನ್ನು ಹೆಚ್ಚಿನ ಪ್ರಚಾರ ನೀಡುವುದರೊಂದಿಗೆ ಚುರುಕು ಗೊಳಿಸಬೇಕೆಂದರು.  ಅಬಕಾರಿ ಇಲಾಖೆಗೆ ಬಾಕಿ ಇರುವ ತೆರಿಗೆ ಮೊತ್ತವನ್ನು ಕಂದಾಯ ಬಾಕಿ ವಸೂಲಾತಿ ರೀತಿಯಲ್ಲಿ ಮಾಡಬೇಕು. ತರೀಕೆರೆ, ಮೂಡಿಗೆರೆ ಹಾಗೂ ಶೃಂಗೇರಿ ತಾಲೂಕಿನ ತಾಲ್ಲೂಕು ಕಚೇರಿಯ ಕಟ್ಟಡಗಳ ದುರಸ್ಥಿಗೆ ಕ್ರಮಕೈಗೊಳ್ಳಬೇಕು ಎಂದರು.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವಂತಹ ದೇವಸ್ಥಾನಗಳ ಆರಾಧನೆ ಯೋಜನೆಯಲ್ಲಿ ಅಭಿವೃದ್ಧಿ ಪಡಿಸುವುದರ ಜೊತೆಗೆ ದೇವಸ್ಥಾನ ಜಾಗದ ಒತ್ತುವರಿಯನ್ನು ತೆರವುಗೊಳಿಸಬೇಕೆಂದರು.
ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಉಪ ವಿಭಾಗಾಧಿಕಾರಿ ಕೆ. ಚನ್ನಬಸಪ್ಪ, ತಹಸೀಲ್ದಾರ್‌ಗಳು ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.



ರೈತರ ಜಮೀನು ಮಣ್ಣು ಪರೀಕ್ಷೆ
ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳ ಮಣ್ಣು ಪರೀಕ್ಷೆ ಒಳಪಡಿಸುವುದರೊಂದಿಗೆ ಅವರಿಗೆ ಅಗತ್ಯ ಪೋಷಕಾಂಶಗಳನ್ನು ನೀಡಲು ಸಲಹೆ ಮಾಡಬೇಕೆಂದ ಅವರು, ಮುಂಗಾರು ಹಂಗಾಮಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರಗಳು, ಕೀಟನಾಶಕಗಳನ್ನು ದಾಸ್ತಾನು ಇರಿಸಿಕೊಂಡು, ರೈತರ ಅವಶ್ಯಕತೆಗನುಸಾರವಾಗಿ ಸಮರ್ಪಕವಾಗಿ ವಿತರಣೆ ಮಾಡಬೇಕೆಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ತ್ವರಿತಗತಿಯಲ್ಲಿ ಜಾತಿ ಮತ್ತು ಆದಾಯ ದೃಢೀಕರಣ ಪತ್ರಗಳನ್ನು ನೀಡಲು ಕಂದಾಯ ಇಲಾಖಾ ಅಧಿಕಾರಿಗಳು ಕ್ರಮಕೈಗೊಳ್ಳ ಬೇಕೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement