ಸೀಗೋಡು ಶಾಲೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ
ಬಾಳೆಹೊನ್ನೂರು: ಮಲೇರಿಯಾ ರೋಗ ಅಪಾಯಕಾರಿ. ಸಾರ್ವಜನಿಕರು ಈ ರೋಗ ಬಾರದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಸಹಾಯಕ ಭಗವಾನ್ ಹೇಳಿದರು.
ಇಲ್ಲಿಗೆ ಸಮೀಪದ ಸೀಗೋಡು ಪ್ರಾಥಮಿಕ ಉಪ ಕೇಂದ್ರ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಲೇರಿಯಾ ರೋಗ ಈ ಹಿಂದೆಯೂ ಬರುತ್ತಿತ್ತು. ಈ ಕುರಿತು ಅರಿವಿಲ್ಲದ ಕೆಲ ವ್ಯಕ್ತಿಗಳು ಇದು ಕೆಟ್ಟ ಗಾಳಿಯಿಂದ ಬರುವ ರೋಗ ಎಂದು ತಿಳಿದಿದ್ದರು. ಆದರೆ, ಇದರ ಕುರಿತು ಅಧ್ಯಯನ ಮಾಡಿದಾಗ ಇದು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಬರುವ ರೋಗ ಎಂದು ದೃಢಪಟ್ಟಿದೆ.
ವಿಪರೀತ ಜ್ವರ, ಚಳಿ, ಬೆವರು, ತಲೆನೋವು ಮುಂತಾದವುಗಳು ಮಲೇರಿಯಾ ರೋಗದ ಲಕ್ಷಣ. ಇವು ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಆಸ್ಪತ್ರೆಗಳಲ್ಲಿ ರಕ್ತಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಅಧ್ಯಕ್ಷತೆ ವಹಿಸಿದ್ದು, ಆರೋಗ್ಯ ಇಲಾಖೆ ನಡೆಸುವ ಇಂತಹ ಕಾರ್ಯಕ್ರಮಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳೂ ಭಾಗವಹಿಸುವುದರಿಂದ ರೋಗ ತಡೆಗಟ್ಟಲು ಸಾಧ್ಯ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಬಹುದು ಎಂದರು.
ಹೇರೂರು ಗ್ರಾಪಂ ಸದಸ್ಯ ವಿನೋದಿನಿ, ಆರೋಗ್ಯ ಸಹಾಯಕಿ ಲೀಲಾವತಿ, ಮುಖ್ಯೋಪಾಧ್ಯಾಯ ಶಂಕರಪ್ಪ, ಶಿಕ್ಷಕರಾದ ಗ್ರೇಸಿ ಡಿಸೋಜಾ, ಜೀವನ್ ಎವ್ಲಿನ್, ಜ್ಯೋತಿಲಕ್ಷ್ಮಿ ಉಪಸ್ಥಿತರಿದ್ದರು.