ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸೌಲಭ್ಯಗಳಿಗೆ ಪರದಾಡುತ್ತಿರುವ ರಬ್ಬರ್ ಬೆಳೆಗಾರ

Rashmi Kasaragodu
Updated On : 19 Jun 2014, 11:49 am

ಯಡಗೆರೆ ಮಂಜುನಾಥ್  
ನರಸಿಂಹರಾಜಪುರ: ರಾಜ್ಯದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಹೊರ ಹೊಮ್ಮಿದ್ದ ರಬ್ಬರ್‌ಗೆ ಕೇಂದ್ರ ಸರ್ಕಾರ ನಿರೀಕ್ಷಿತ ಪ್ರೋತ್ಸಾಹ ನೀಡದೆ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ರಬ್ಬರ್ ಬೆಳೆಗಾರರಲ್ಲಿ ನಿರಾಸೆ ಮನೆಮಾಡಿದೆ.
ಪ್ರಮುಖವಾಗಿ ಮಲೆನಾಡು ಭಾಗದಲ್ಲಿ ಅಡಿಕೆ, ಕಾಫಿ ಬೆಳೆ ಬಳಿಕ ಚಿನ್ನದ ಬೆಳೆಯಾಗಿ ರಬ್ಬರ್ ರೈತರನ್ನು ಆಕರ್ಷಿಸಿತ್ತು. ಕಾಲ, ಕಾಲಕ್ಕೆ ತಾಂತ್ರಿಕ ಮಾಹಿತಿ ನೀಡುವ ರಬ್ಬರ್ ಮಂಡಳಿ ಅಧಿಕಾರಿಗಳು, ರಬ್ಬರ್ ತೋಟಕ್ಕೆ ಸಾಲ ನೀಡುವ ಭೂ ಅಭಿವೃದ್ಧಿ ಬ್ಯಾಂಕ್, ಮಂಡಳಿಯಿಂದ ಬರುತ್ತಿದ್ದ ಸಹಾಯಧನ ಹಾಗೂ ರಬ್ಬರ್ ಧಾರಣೆ ಸಹ ಏರಿಕೆಯಾಗಿ ಬೆಳೆಗಾರರು ಖುಷಿಯಾಗಿದ್ದರು. 2000 ನೇ ಇಸವಿಯಲ್ಲಿ 30 ರಿಂದ 40 ರುಪಾಯಿ ಇದ್ದ ರಬ್ಬರ್ ಧಾರಣೆ 2012-13ರಲ್ಲಿ 240 ರುಪಾಯಿ ದಾಖಲೆ ಬರೆದಿತ್ತು.
ಸಿಬ್ಬಂದಿ ಕೊರತೆ:  ಕಳೆದ ಎರಡು ವರ್ಷಗಳಿಂದ ನಿಧಾನವಾಗಿ ರಬ್ಬರ್ ಧಾರಣೆ ಕುಸಿತ ಕಂಡಿದ್ದು ಈಗ ಸಾಮಾನ್ಯ (ಲಾಟ್) ರಬ್ಬರ್ ಕೆಜಿ ಗೆ ರು. 138ಗೆ ಕುಸಿದಿದೆ. ಹಿಂದೆ ರಬ್ಬರ್ ತೋಟ ಮಾಡಿದವರಿಗೆ ರಬ್ಬರ್ ಮಂಡಳಿ ಗಿಡ ನೆಟ್ಟು 7 ವರ್ಷದವರೆಗೂ ಹಂತ ಹಂತವಾಗಿ ಸಹಾಯಧನ ನೀಡುತ್ತಿತ್ತು. ಈಗ 7 ವರ್ಷದಲ್ಲಿ 3 ಬಾರಿ ಮಾತ್ರ ಸಹಾಯಧನ ಬಿಡುಗಡೆಯಾಗುತ್ತಿದ್ದರೂ ಸಮರ್ಪಕವಾಗಿ ಬರುತ್ತಿಲ್ಲ ಎಂಬುದು ಬೆಳೆಗಾರರ ಆರೋಪ.  ಹೊಸದಾಗಿ ರಬ್ಬರ್ ತೋಟ ಮಾಡಲಿಚ್ಛಿಸುವವರಿಗೆ ತಾಂತ್ರಿಕ ಮಾಹಿತಿ ನೀಡುವ ಕ್ಷೇತ್ರಾಭಿವೃದ್ಧಿ ಅಧಿಕಾರಿಗಳಿಲ್ಲದೇ ಇರುವುದು ಮತ್ತಷ್ಚು ತೊಂದರೆಯಾಗುತ್ತಿದೆ.
ನರಸಿಂಹರಾಜಪುರ ರಬ್ಬರ್ ಮಂಡಳಿಗೆ ಕಳೆದ 2 ವರ್ಷದಿಂದ ತೀರ್ಥಹಳ್ಳಿಯ ಕ್ಷೇತ್ರಾಧಿಕಾರಿಗಳು 15 ದಿನಕ್ಕೊಮ್ಮೆ ಬಂದು ಹೋಗುತ್ತಿದ್ದರು. 3 ತಿಂಗಳಿಂದ ನರಸಿಂಹರಾಜಪುರಕ್ಕೆ ಕ್ಷೇತ್ರಾಭಿವೃದ್ಧಿ ಅಧಿಕಾರಿ ಬಂದಿದ್ದು, ಆದರೆ, ತಾಲೂಕಿನ ಮಲ್ಲಂದೂರು, ಕೋಣನಕೆರೆ, ಸೀತೂರು ಭಾಗದ ರಬ್ಬರ್ ಬೆಳೆಗಾರರ ವ್ಯಾಪ್ತಿ ಹಾಗೂ ಕೊಪ್ಪ, ಶೃಂಗೇರಿ ತಾಲೂಕುಗಳ ವ್ಯಾಪ್ತಿ ಮಾತ್ರ ಇದಕ್ಕೆ ಸೇರುತ್ತದೆ.
ಮಾಹಿತಿ ನೀಡುತ್ತಿಲ್ಲ:
ಸೀತೂರು ಗ್ರಾಪಂ ವ್ಯಾಪ್ತಿಯ ಕೊನೋಡಿ ಗ್ರಾಮದಲ್ಲಿ 19 ಎಕ್ರೆಗಳಲ್ಲಿ ರಬ್ಬರ್ ಬೆಳೆದಿರುವ ಕಾನೊಳ್ಳಿ ಕೃಷ್ಣಪ್ಪಗೌಡ ಕನ್ನಡಪ್ರಭದೊಂದಿಗೆ ಮಾತನಾಡಿ, ನಾನು ಕಳೆದ 3 ವರ್ಷಗಳ ಹಿಂದೆ 19 ಎಕ್ರೆ ಪ್ರದೇಶದಲ್ಲಿ 5 ಸಾವಿರ ರಬ್ಬರ್ ಗಿಡ ನೆಟ್ಟಿದ್ದೇನೆ. ಆದರೆ, ಮಂಡಳಿ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಕುಂದಾಪುರ ರಬ್ಬರ್ ಮಂಡಳಿಗೆ ಪೋನ್ ಮಾಡಿ ಎನ್ನುತ್ತಾರೆ. ಅಲ್ಲಿಗೆ ಕರೆ ಮಾಡಿದರೆ ಇಂಗ್ಲಿಷ್ ಅಥವಾ ಮಲೆಯಾಳಿ ಭಾಷೆಯಲ್ಲಿ ಉತ್ತರ ನೀಡುತ್ತಾರೆ. 3 ವರ್ಷದಿಂದ ಸಹಾಯಧನ ಬಂದಿಲ್ಲ ಎಂದು ಅಳಲು ತೋಡಿಕೊಂಡರು.
ಬೆಳೆಗಾರರು ಸ್ಪಂದಿಸಬೇಕು: ರಬ್ಬರ್ ಬೆಳೆಗಾರರ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಲೂಕು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಟಿ.ವಿ.ವಿಜಯ್, ತಾಲೂಕು ರಬ್ಬರ್ ಉತ್ಪಾದಕರ ಸಂಘದ ಪ್ರಯತ್ನದಿಂದ ಕಳೆದ 3 ತಿಂಗಳ ಕೆಳಗೆ ನರಸಿಂಹರಾಜಪುರ ರಬ್ಬರ್ ಮಂಡಳಿಗೆ ಅಭಿವೃದ್ದಿ ಅಧಿಕಾರಿಗಳ ನೇಮಕವಾಗಿದೆ. ವಿಚಾರ ಸಂಕಿರಣ ಏರ್ಪಡಿಸಿ ಬೆಳೆಗಾರರಿಗೆ ಮಾಹಿತಿ ನೀಡಲು, ಪ್ರಚಾರ ಮಾಡಿದರೂ ಬೆಳೆಗಾರರೇ ಸಭೆಗೆ ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿ, ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಸಹಾಯಧನ ಕಡಿಮೆಯಾಗಿದೆ.ಜನ ಪ್ರತಿನಿಧಿಗಳ ಮೂಲಕ ಹೋರಾಟ ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದರು.


ರು. 1.20 ಕೋಟಿ ಬಾಕಿ
ಕುಂದಾಪುರ ಪ್ರಾದೇಶಿಕ ರಬ್ಬರ್ ಮಂಡಳಿಯ ವ್ಯಾಪ್ತಿಯಲ್ಲಿ ರಬ್ಬರ್ ಬೆಳೆಗಾರರಿಗೆ ರು. 1ಕೋಟಿ 20 ಲಕ್ಷ ಸಹಾಯಧನ ಬಾಕಿ ಇದೆ ಎನ್ನುತ್ತಾರೆ ಕುಂದಾಪುರ ಮಂಡಳಿಯ ಉಪ ಆಯುಕ್ತ ಡಿ.ನಾರಾಯಣಸ್ವಾಮಿ. ಕಳೆದ 2 ವರ್ಷಗಳಲ್ಲಿ ರು. 2 ಕೋಟಿ 20 ಲಕ್ಷ ಸಹಾಯಧನ ನೀಡಬೇಕಾಗಿತ್ತು. ಆದರೆ ನೀಡಿದ್ದು ಮಾತ್ರ 1ಕೋಟಿ. ಈ ಬಗ್ಗೆ ಎಷ್ಚು ಪತ್ರ ವ್ಯವಹಾರ ಮಾಡಿದರೂ ಹಣ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ 65 ಸಾವಿರ ಹೆಕ್ಚೇರ್ ಪ್ರದೇಶದಲ್ಲಿ ರಬ್ಬರ್ ಬೆಳೆಯುತ್ತಿದ್ದು 38 ಸಾವಿರ ಹೆಕ್ಚೇರ್ ರಬ್ಬರ್ ಉತ್ಪನ್ನ ಆಗುತ್ತಿದೆ. 400 ರಿಂದ 500 ಕೋಟಿ ರು. ವಾರ್ಷಿಕ ವ್ಯವಹಾರ ನಡೆಯುತ್ತಿದ್ದು ಇದರಿಂದ ರಾಜ್ಯಕ್ಕೆ 50 ರಿಂದ 60 ಕೋಟಿ ರು. ತೆರಿಗೆ ಬರುತ್ತಿದೆ. ರಾಜ್ಯ ಸರ್ಕಾರವು ಸಹ ರಬ್ಬರ್ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡುತ್ತಿಲ್ಲ. ಕೇಂದ್ರ ಸರ್ಕಾರವು ಮಂಡಳಿಗೆ ಅಗತ್ಯವಾದ ಸಿಬ್ಬಂದಿ ನೇಮಕ ಮಾಡುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement