ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಗ್ಗತ್ತಲಲ್ಲಿ ಜಯಪುರ

Rashmi Kasaragodu
Updated On : 20 Jun 2014, 11:46 am

ಜಯಪುರ: ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಯಪುರ ಕಗ್ಗತ್ತಲಲ್ಲಿ ಮುಳುಗಿ ಹೋಗಿದೆ. ಮಂಗಳವಾರ ರಾತ್ರಿ ಪ್ರಾರಂಭವಾದ ಮೃಗಶಿರ ಮಳೆ ನಿರಂತರ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಭಾರಿ ಮಳೆಯಿಂದಾಗಿ ಕೆಲವೊಂದು ಮರಗಳು ಹಾಗೂ ಬಿದಿರುಗಳು ವಿದ್ಯುತ್ ತಂತಿ ಮೇಲೆ ಬೀಳುತ್ತಿದ್ದು, ಇದರಿಂದ ಜಯಪುರ, ಕಟ್ಟೆಮನೆ, ಬಿಳಾಲುಕೊಪ್ಪ, ಮೆಣಸಿನಹಾಡ್ಯ, ಬೆಂಡೇಹಕ್ಲು, ಗುಡ್ಡೇತೋಟ, ಅಗಳಗಂಡಿ ಭಾಗದಲ್ಲಿ 2 ದಿನಗಳಿಂದ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದ್ದು, ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.
ಕೂಳೂರು ಸಮೀಪ ಸೇತುವೆ ಬಳಿ ಬಿದಿರು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಗುರುವಾರ ಬೆಳಿಗ್ಗೆಯಿಂದಲೇ ಮೆಸ್ಕಾಂ ಸಿಬ್ಬಂದಿ ಜಯಪುರ- ಅಗಳಗಂಡಿ ಭಾಗದ ವಿದ್ಯುತ್ ಸ್ಥಗಿತಗೊಳಿಸಿ, ದುರಸ್ಥಿಯಲ್ಲಿ ತೊಡಗಿದ್ದಾರೆ.
ಗುರುವಾರ ಬೆಳಿಗ್ಗೆ ಬಸರೀಕಟ್ಟೆ- ಜಯಪುರ ರಸ್ತೆಯ ಎಮ್ಮೆಗೊಂಡ ಸಮೀಪ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಸುಮಾರು 2 ಗಂಟೆ ಕಾಲ ವಾಹನ ಸಂಚಾರ ನಿಂತು ಹೋಗಿತ್ತು. ನಂತರ ಸ್ಥಳೀಯರ ಸಹಾಯದಿಂದ ಮರವನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಯಿತು.

ಜಯಪುರ ಮೆಸ್ಕಾಂಗೆ 26 ಲೈನ್‌ಮನ್‌ಗಳ ಹುದ್ದೆ ಇದ್ದು, ಪ್ರಸ್ತುತ ಕೇವಲ 6 ಲೈನ್‌ಮ್ಯಾನ್‌ಗಳಿದ್ದಾರೆ. ಅದರಲ್ಲೂ ಇಬ್ಬರು ಲೈನ್‌ಮ್ಯಾನ್‌ಗಳು ರಜದ ಮೇಲೆ ತೆರಳಿದ್ದು, ನಾಲ್ವರು ಲೈನ್‌ಮ್ಯಾನ್ ವಿದ್ಯುತ್ ನಿರ್ವಹಣೆಯಲ್ಲಿ ಪರದಾಡುತ್ತಿದ್ದಾರೆ. ಸೆಕ್ಷನ್ ಆಫೀಸರ್ ಹುದ್ದೆ ಕೂಡಾ ಕಳೆದ ಒಂದು ವರ್ಷದಿಂದ ಖಾಲಿ ಇದೆ.
ಸಮಗ್ರ ಗಿರಿಜನ ಇಲಾಖೆಯ ಉಸ್ತುವಾರಿಯಲ್ಲಿರುವ ಮೆಣಸಿನಹಾಡ್ಯದ ಆಶ್ರಮ ಶಾಲೆಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಕಂಬ ಮುರಿದು ಬಿದ್ದ ಕಾರಣ, ಕಳೆದ 30 ದಿನಗಳಿಂದ ಶಾಲೆಗೆ ವಿದ್ಯುತ್ ಸರಬರಾಜು ಇಲ್ಲದೆ ಮಕ್ಕಳು ಪರಿತಪಿಸುವಂತಾಗಿದೆ.
ಕಟ್ಟೆಮನೆ, ಬಿಳಾಲುಕೊಪ್ಪ, ಮೆಣಸಿನಹಾಡ್ಯ, ಬೆಂಡೇಹಕ್ಲು, ಗುಡ್ಡೇತೋಟ, ಅಗಳಗಂಡಿ ಈ ಭಾಗದಲ್ಲಿ 2 ದಿನದಿಂದ ವಿದ್ಯುತ್ ಪೂರೈಕೆ ಇಲ್ಲದೆ ಸಾರ್ವಜನಿಕರು ಸೀಮೆಎಣ್ಣೆ ದೀಪಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಸರ್ಕಾರ ಎಪಿಎಲ್ ಕಾರ್ಡ್‌ಗೆ ಸೀಮೆಎಣ್ಣೆ ನಿಲ್ಲಿಸಿರುವ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದಾರೆ.
 ಕಾಂಕ್ರಿಟರೀಕರಣಕ್ಕೆಂದು ಕಳೆದ ಒಂದೂವರೆ ತಿಂಗಳಿನಿಂದ ಕಾರ್ಕಳದ ಶರೀಫ್ ಕನ್ಸ್‌ಷ್ಟ್ರಕ್ಷನ್ಸ್‌ರವರು ಜಯಪುರದ ಮುಖ್ಯ ರಸ್ತೆಯ ಡಾಂಬರನ್ನು ಅಗೆದು ತೆಗೆದಿದ್ದಾರೆ. ಇದುವರೆಗೂ ಕಾಂಕ್ರೀಟ್ ಪ್ರಾರಂಭವಾಗದ ಕಾರಣ ರಸ್ತೆಯಲ್ಲಿ ನೀರು ತುಂಬಿದ್ದು, ಸಾರ್ವಜನಿಕರ ಅದರಲ್ಲೂ ಮುಖ್ಯವಾಗಿ ಮಕ್ಕಳ ಓಡಾಡಕ್ಕೆ ತೊಂದರೆಯಾಗಿದೆ. ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಇಂಜಿನಿಯರ್‌ಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಮುಖ್ಯ ರಸ್ತೆಯಲ್ಲಿ ಪ್ರತಿ ದಿವಸ ಒಂದಲ್ಲ ಒಂದು ಅಪಘಾತವಾಗುತ್ತಿದೆ. ರಸ್ತೆ ಅವ್ಯವಸ್ಥೆಯಿಂದಾಗಿ ವಾಹನ ಸ್ಕಿಡ್ ಆಗುವುದು, ಒಂದಕ್ಕೊಂದು ಡಿಕ್ಕಿ ಆಗುವುದು, ರಸ್ತೆಯಿಂದ ಚರಂಡಿಗೆ ಬೀಳುವುದು ಸರ್ವೇ ಸಾಮಾನ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement