ಕರ್ತವ್ಯಲೋಪ ಪಿಡಿಒ ಅಮಾನತು
ಬಾಳೆಹೊನ್ನೂರು: ಕರ್ತವ್ಯಲೋಪದ ಹಿನ್ನಲೆಯಲ್ಲಿ ಬಿ. ಕಣಬೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಕೆ.ಟಿ. ರತ್ನಮ್ಮ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ್ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.
ಬಿ. ಕಣಬೂರು ಗ್ರಾಮ ಪಂಚಾಯಿತಿಯ ಒಂದನೇ ವಾರ್ಡ್ ವ್ಯಾಪ್ತಿಯಲ್ಲಿರುವ ವಾಟುಕೊಡುಗೆಯಲ್ಲಿ ಆದಿವಾಸಿಗಳಿಗೆ ಮೀಸಲಾಗಿಟ್ಟಿದ್ದ 2 ಎಕರೆ ಜಾಗವನ್ನು ಚನ್ನಪ್ಪಗೌಡ ಎಂಬವರಿಗೆ ದಾಖಲೆ ತಿದ್ದಿ ಖಾತೆ ಮಾಡಿಕೊಡಲಾಗಿತ್ತು ಎನ್ನಲಾಗಿದೆ. ಈ ಸಂಬಂಧ ಜಿಲ್ಲಾ ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಆಶ್ರಯದಲ್ಲಿ ಆದಿವಾಸಿಗಳು ಬಿ. ಕಣಬೂರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ತನಿಖೆಗೆ ಆಗ್ರಹಿಸಿದ್ದರು.
ಈ ಕುರಿತು ತನಿಖೆ ನಡೆಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ್ ಅವರು ನರಸಿಂಹರಾಜಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಜಗದೀಶ್ ಅವರಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿ ಜಗದೀಶ್ ಅವರು ಕೊಟ್ಟ ವರದಿಯ ಆಧಾರದ ಮೇಲೆ ಕರುಣಾಕರ್ ಅವರು ಕೆ.ಟಿ. ರತ್ನಮ್ಮ ಅವರನ್ನು ಅಮಾನತುಗೊಳಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ.