ನಾಯಿ ದಾಳಿ: ಜಿಂಕೆ ಸಾವು
ಮೂಡಿಗೆರೆ: ಜಿಂಕೆಯೊಂದನ್ನು ನಾಯಿಗಳ ಹಿಂಡು ದಾಳಿ ನಡೆಸಿ ಕೊಂದಿರುವ ಘಟನೆ ತಾಲೂಕಿನ ಸಾರಗೋಡು ಕುಂದೂರು ವಸತಿ ಗೃಹದ ಬಳಿ ನಡೆದಿದೆ.
ಬೆಳಗ್ಗೆ 6 ಗಂಟೆಗೆ ಜಿಂಕೆ ಮೇಯುತ್ತಿದ್ದಾಗ ನಾಯಿಗಳು ದಾಳಿ ನಡೆಸಿವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದು, ಮೂಡಿಗೆರೆ ಪಶು ವೈದ್ಯಕೀಯ ಆಸ್ಪತ್ರೆಗೆ ಜಿಂಕೆ ಶವ ಪರೀಕ್ಷೆಗೆ ಸಾಗಿಸಲಾಯಿತು. ಬಳಿಕ ಬಿದರಹಳ್ಳಿ ಪ್ಲಾಂಟೇಶನ್ನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಹಳ್ಳಿಗರ ವಲಸೆ ತಪ್ಪಿಸಲು ಶ್ರಮಿಸಿ
ಚಿಕ್ಕಮಗಳೂರು: ಉದ್ಯೋಗವೆಂದರೆ ಕೇವಲ ಸರ್ಕಾರಿ ಸೇವೆ ಅಥವಾ ಖಾಸಗಿ ಸೇವೆ ಎಂಬುದು ಇತ್ತೀಚಿನ ದಿನಗಳಲ್ಲಿ ನಿರುದ್ಯೋಗಿ ಯುವಕ ಯುವತಿಯರ ತಪ್ಪು ಕಲ್ಪನೆ. ಮನೆಯಲ್ಲಿ ಕೃಷಿ ಮಾಡುವುದು ಕೂಡ ಒಂದು ಉದ್ಯೋಗ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಬಿ. ಕರುಣಾಕರ್ ಹೇಳಿದ್ದಾರೆ.
ನಗರದ ಕಾರ್ಪೋರೇಷನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ವಿಕಲಚೇತನರ ಸಬಲೀಕರಣ ಹಾಗೂ ಹಿರಿಯ ನಾಗರಿಕ ಕಲ್ಯಾಣ ಇಲಾಖೆ ಮತ್ತು ಎನೇಬಲ್ ಇಂಡಿಯಾದ ಸಹಯೋಗದೊಂದಿಗೆ ಆಯೋಜಿಸಿದ್ದ ಉದ್ಯಮಶೀಲತಾ ಕೌಶಲ್ಯ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಲಸೆ ತಪ್ಪಿಸಿ: ಯುವ ಸಮೂಹ ಉದ್ಯೋಗ ಅರಸುತ್ತ ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಪೋರೇಷನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ಅತ್ಯುತ್ತಮವಾದ ತರಬೇತಿ ನೀಡುವುದರ ಮೂಲಕ ಎಲ್ಲಾ ಸ್ವ ಉದ್ಯೋಗಿಗಳಿಗೆ ಬದುಕು ಕಟ್ಟಿಕೊಳ್ಳಲು ಬೇಕಾದ ಮಾಹಿತಿ, ಮಾರ್ಗದರ್ಶನವನ್ನು ಕಳೆದ 18 ವರ್ಷಗಳಿಂದ ನೀಡುತ್ತಿದೆ ಎಂದರು.
ಕಾರ್ಪೋರೇಷನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಆರ್.ಕೆ. ಬಾಲಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 18 ವರ್ಷಗಳಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಯುವ ಜನರು ತರಬೇತಿ ಪಡೆದಿದ್ದು, ಶೇ. 70ರಷ್ಟು ಯುವ ಸಮೂಹ ಸ್ವ ಉದ್ಯೋಗ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಮಾತನಾಡಿ, ಬಹುಶಃ ಕಾಬ್ಸೆಟ್ ಸಂಸ್ಥೆ ಒಂದು ರೀತಿಯಲ್ಲಿ ಜಾದೂವನ್ನೇ ಸೃಷ್ಟಿ ಮಾಡಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಚ್.ಜೆ. ಚಂದ್ರಶೇಖರಯ್ಯ ಮಾತನಾಡಿ, ಈ ತರಬೇತಿ ಶ್ರಮ ಮತ್ತು ಶ್ರದ್ಧೆಯನ್ನು ನಿಮ್ಮಿಂದ ನಿರೀಕ್ಷಿಸಿತ್ತು. ಅದನ್ನು ನೀವು ಪಡೆದು ಕೊಂಡಿದ್ದೀರಿ. ನಿಮ್ಮ ಅನಿಸಿಕೆಯಲ್ಲಿಯೇ ನಾಯಕತ್ವದ ಗುಣವನ್ನು ಹಾಗೂ ಸ್ವ ಉದ್ಯೋಗಕ್ಕೆ ಬೇಕಾಗುವ ಸಂಪೂರ್ಣ ಮಾಹಿತಿಯನ್ನು ನೀವು ಪಡೆದುಕೊಂಡಿದ್ದೀರಿ ಎಂಬುದು ತಿಳಿಯುತ್ತಿದೆ. ಅದರ ಸದುಪಯೋಗ ಮಾಡಿಕೊಳ್ಳಿರೆಂದು ಕರೆ ನೀಡಿದರು.
ಎನೇಬಲ್ ಇಂಡಿಯಾ ಸಂಸ್ಥೆಯ ಅಭಿವೃದ್ಧಿ ಸಲಹೆಗಾರ ಬಿ. ಶಿವಪ್ರಸಾದ್ ವಂದಿಸಿದರು.