ಮಹಾಕಾವ್ಯದ ಸಾರ ಬದುಕಿಗೆ ಮಾರ್ಗದರ್ಶಕವಾಗಲಿ: ಹರಿಪ್ರಸಾದ್
ತರೀಕೆರೆ: ಗಮಕ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಕಂಬದ ಬೀದಿ ಶಾಲೆಯಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ಹರಿಪ್ರಸಾದ್ ಉದ್ಘಾಟನೆ ನೆರವೇರಿಸಿ, ಇಂದು ಬದುಕು ಯಾಂತ್ರಿಕವಾಗಿದ್ದು, ಮಾನವೀಯ ಭಾವನೆಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಆಧುನಿಕತೆಯ ಸೋಗಿಗೆ ಸಿಲುಕಿ ಸಂಸ್ಕಾರ ಮತ್ತು ಸಂಸ್ಕೃತಿ ಅಳೆಯುವ ಮಟ್ಟಕ್ಕೆ ಜನ ತಲುಪಿದ್ದಾರೆ ಎಂದರು.
ಭಾರತೀಯ ಸಂಸ್ಕೃತಿಯ ಮೇರು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿನ ಸಾರವು ಬದುಕಿಗೆ ಮಾರ್ಗದರ್ಶನವಾಗಿದೆ. ಹಿಂದೆ ಕಾವ್ಯಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡುವುದರ ಮೂಲಕ ಆಧ್ಯಾತ್ಮಿಕ ಚಿಂತನೆಗಳಿಂದ ಸಂಸ್ಕೃತಿಯನ್ನು ಪೋಷಿಸಲಾಗುತ್ತಿತ್ತು ಎಂದರು.
ಜಿಲ್ಲಾ ಗಮಕ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಸುಬ್ರಾಯ ಶೇಟ್ ಮಾತನಾಡಿ, ರಾಮಾಯಣ, ಮಹಾಭಾರತಮಹಾಕಾವ್ಯಗಳಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಹುಟ್ಟುಹಾಕಲು ಸಾಧ್ಯ ಎಂದರು.
ಕನ್ನಡಶ್ರೀ ಬಿ.ಎಸ್. ಭಗವಾನ್ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಕೆಲಸ ಆಗಬೇಕಿದೆ. ಹಾಗಾದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಗಮಕಿ ಶಾರದಾ ಎನ್.ಮಂಜುನಾಥ್ ಗಮಕ ವಾಚನ ಮಾಡಿದರು. ತಾಲೂಕು ಗಮಕ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಮುಖ್ಯೋಪಾಧ್ಯಾಯ ಮಂಜಪ್ಪ, ಕಸಾಪ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.