ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರೈಲಿಗೆ ಲಾರಿ ಡಿಕ್ಕಿ: ಚಾಲಕ ಸಾವು

Rashmi Kasaragodu
Updated On : 21 Jun 2014, 11:24 am

ಬೀರೂರು: ಸಮೀಪದ ಹೆಬ್ಬೂರು ಗ್ರಾಮದಿಂದ ನಾರಾಣಾಪುರ, ಶಿವನಿಗೆ ಸಂಪರ್ಕಿಸುವ ರೇಲ್ವೆ ಗೇಟ್‌ನಲ್ಲಿ ಇಂಟರ್‌ಸಿಟಿ ರೈಲಿಗೆ ಜಲ್ಲಿ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಚಾಲಕ ಹೊಸದುರ್ಗದ ಸಂದೀಪ್(30) ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಬೆಂಗಳೂರು- ಧಾರವಾಡ ಇಂಟರ್‌ಸಿಟಿ ರೈಲು ಸಂಜೆ ಹೆಬ್ಬೂರು ಸಮೀಪ ಅತಿ ವೇಗದಲ್ಲಿ ಬರುತ್ತಿದ್ದು, ರೇಲ್ವೆ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಟಿಪ್ಪರ್ ಚಾಲಕ ರೈಲು ಬರುತ್ತಿರುವುದನ್ನು ಗಮನಿಸದೆ ಚಲಾಯಿಸಿದ. ಮಧ್ಯದ ಹಳಿ ಮೇಲೆ ನಿಂತ ಟಿಪ್ಪರ್‌ಗೆ ರೈಲು ಗುದ್ದಿದ ಪರಿಣಾಮ ಲಾರಿ ಚಾಲಕನ ಕೈ ತುಂಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗುದ್ದಿದ ರಭಸಕ್ಕೆ ಲಾರಿ ಪುಡಿ ಪುಡಿಯಾಗಿ ದೂರದಲ್ಲಿ ಬಿದ್ದಿದೆ.
ಲಾರಿ ಚಾಲಕನು ಅಜಾಗರೂಕತೆಯಿಂದ ಅತಿ ವೇಗದಲ್ಲಿ ಚಾಲನೆ ಮಾಡುತ್ತಿದ್ದು, ಜೋರಾಗಿ ಟೇಪ್ ರೆಕಾರ್ಡರ್‌ನಲ್ಲಿ ಹಾಡು ಕೇಳುತ್ತಿದ್ದುದರಿಂದ ರೈಲು ಬರುತ್ತಿರುವ ಸದ್ದು ಕೇಳಿಸಿಲ್ಲ. ಅಪಘಾತ ಸಂಭವಿಸಿದ ನಂತರವೂ ಲಾರಿಯ ಟೇಪ್ ರೆಕಾರ್ಡರ್‌ನಲ್ಲಿ ಹಾಡು ಜೋರಾಗಿ ಕೇಳುತ್ತಿತ್ತು.
ಸಾರ್ವಜನಿಕರ ಆಕ್ರೋಶ: ರೇಲ್ವೆ ಇಲಾಖೆಗೆ ಇಲ್ಲೊಂದು ಗೇಟ್ ನಿರ್ಮಿಸಲು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ಪ್ರದೇಶ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿದ್ದು, ಹಲವು ತಿರುವು ಹೊಂದಿದೆ. ರೈಲು ಬರುತ್ತಿರುವುದು-ಹೋಗುವುದು ಏನೊಂದು ಗೊತ್ತಾಗುವುದಿಲ್ಲ. ವಾಹನ ಚಾಲಕರಿಗೆ ಗೊತ್ತಾಗುವುದರೊಳಗೆ ಇಲ್ಲಿ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಹಲವು ಬಾರಿ ಸಾವಿನ ದವಡೆಯಿಂದ ನಾವು ಪಾರಾಗಿ ಬಂದಿದ್ದೇವೆ. ಇಲ್ಲಿ ಗೇಟ್ ನಿರ್ಮಿಸಿ ಸಿಬ್ಬಂದಿ ನೇಮಿಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಸಾವಿರಾರು ಜನರು ಆಗಮಿಸಿ ರೇಲ್ವೆ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡು ಬಂದಿತು. ಅಜ್ಜಂಪುರ ಪೊಲೀಸರು ಜನರನ್ನು ನಿಯಂತ್ರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement