ವಿದ್ಯುತ್ ತಗುಲಿ ವ್ಯಕ್ತಿ ಸಾವು
ನರಸಿಂಹರಾಜಪುರ: ವಿದ್ಯುತ್ ತಗುಲಿ ಫ್ರಾನ್ಸಿಸ್ ಡಿಸೋಜ (44) ಎಂಬವರು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಕಟ್ಟಿನಮನೆ ಸಮೀಪದ ಹಕ್ಕಲುಮನೆ ಗ್ರಾಮದಲ್ಲಿ ನಡೆದಿದೆ. ಮನೆ ಸಮೀಪದ ಕಬ್ಬಿಣ ಕಂಬದಲ್ಲಿನ ವಿದ್ಯುತ್ ತಂತಿಗಳಿಗೆ ಪಿವಿಸಿ ಪೈಪ್ ಮೂಲಕ ಜಂಪ್ ಹಾಕಲು ಡಿಸೋಜ ಪ್ರಯತ್ನಿಸುತ್ತಿದ್ದರು. ಮಳೆ ನೀರಿನಿಂದ ಪೈಪ್ ನೆಂದಿದ್ದ ಕಾರಣ ವಿದ್ಯುತ್ ಪ್ರವಹಿಸಿ ಕುಸಿದು ಬಿದ್ದರು. ತಕ್ಷಣ ಕುಟುಂಬ ವರ್ಗದವರು, ಗ್ರಾಮಸ್ಥರು ಅವರನ್ನು ಕೊಪ್ಪ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಪ್ರಯೋಜನವಾಗಲಿಲ್ಲ. ಡಿಸೋಜಾ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ನರಸಿಂಹರಾಜಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಯುವಕ ನೀರು ಪಾಲು
ಮೂಡಿಗೆರೆ: ತಾಲೂಕಿನ ಹೆಸಗೋಡು ಗ್ರಾಮದಲ್ಲಿ ಹಳ್ಳ ದಾಟುತ್ತಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಪ್ರಶಾಂತ್ (20) ಮೃತಪಟ್ಟವರು. ಹೆಸಗೋಡು ಗ್ರಾಮದ ತನಿಯ ಎಂಬುವರ ಮಗ ಪ್ರಶಾಂತ್ ಶನಿವಾರ ಹಳ್ಳದಲ್ಲಿ ಇಳಿದು ಮುಂದಕ್ಕೆ ಹೋಗುತ್ತಿದ್ದಂತೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿವೇಶನ ತೆರವಿಗೆ ಒತ್ತಾಯ
ಶೃಂಗೇರಿ: ತಾಲೂಕಿನ ಕಸಬಾ ಹೋಬಳಿ ಕೊಚ್ಚವಳಿ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿರುವ ನಿವೇಶನಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಳೆದ ಒಂದು ವಾರದ ಹಿಂದೆ ಕೊಚ್ಚವಳಅಳಿ ಗ್ರಾಮದ ಸರ್ವೆ ನಂಬರ್ 177 ಹಾಗೂ ಕೂತಗೋಡು ಗ್ರಾಮದ ಸರ್ವೆ ನಂಬರ್ 89 ರಲ್ಲಿ ತೆಕ್ಕೂರು ಕುಂಚೇಬೈಲು ಮುಖ್ಯರಸ್ತೆ ಪಕ್ಕದಲ್ಲಿ ಸರ್ಕಾರಿ ಜಾಗದಲ್ಲಿ ಸುಮಾರು 20 ಕ್ಕೂ ಅಧಿಕ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ, ಕಂದಾಯ ಇಲಾಖೆ, ಕೂತಗೋಡು ಗ್ರಾಮಪಂಚಾಯಿತಿ, ಸಂಬಂಧಪಟ್ಟ ಇಲಾಖೆಯ ಎಲ್ಲಾ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಸಲ್ಲಿಸಲಾಗಿದ್ದರೂ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗಿಲ್ಲ. ಅಧಿಕಾರಿಗಳೇ ಪರೋಕ್ಷವಾಗಿ ಕುಮ್ಮಕ್ಕು ನೀಡುವಂತಿದೆ. ಸಂಬಂಧಪಟ್ಟವರು ಕೂಡಲೇ ಕ್ರಮ ಜರುಗಿಸಿ ಅನಧಿಕೃತ ನಿವೇಶನಗಳನ್ನು ತೆರವುಗೊಳಿಸಬೇಕೆಂದು ಶಿವಪ್ಪ,ರೇವಣ್ಣ,ಪ್ರಶಾಂತ್ ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.