ಮಾಹಿತಿ ನೀಡಲು ರೈತರಿಗೆ ಸೂಚನೆ
ಚಿಕ್ಕಮಗಳೂರು: ಕೃಷಿ ಇಲಾಖೆ ವತಿಯಿಂದ ಕಿಸಾನ್ (ಕರ್ನಾಟಕ ಕೃಷಿ ಮಾಹಿತಿ ಸೇವೆಗಳು ಮತ್ತು ನೆಟ್ ವರ್ಕಿಂಗ್) ಸರಕಾರದ ಯೋಜನೆಗಳನ್ನು ನೇರವಾಗಿ ರೈತರಿಗೆ ತಲುಪಿಸುವ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ರೈತರು ಮತ್ತು ಕೃಷಿ ಭೂಮಿ ಬಗ್ಗೆ ಸಂಪೂರ್ಣವಾಗಿ ರೈತರ ವಿವರ ಸಂಗ್ರಹಿಸಿ ಆಧಾರ್ ಯೋಜನೆಯಲ್ಲಿ ರೈತರಿಗೆ ಅಧಿಕೃತ ಸಂಖ್ಯೆ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಕೃಷಿ ಇಲಾಖೆಯ ಸಿಬ್ಬಂದಿ, ರೈತ ಅನುವುಗಾರರು ರೈತರ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ರೈತರು ಹೊಂದಿರುವ ಜಮೀನಿನ ಹಿಡುವಳಿ ಮಾಹಿತಿಯನ್ನು, ಪಹಣಿ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕಗಳ ಹಾಗೂ ಚುನಾವಣಾ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಗಳನ್ನು ನೀಡಲು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಪರೀಕ್ಷಾ ತರಬೇತಿ
ಚಿಕ್ಕಮಗಳೂರು: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ 45 ದಿನಗಳ ಪರೀಕ್ಷಾ ಪೂರ್ವ ತರಬೇತಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಜೂ. 27 ರೊಳಗೆ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆವರಣದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯೊಳಗೆ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿವಿ ಕುಲಸಚಿವ ಪ್ರೊ. ಪಿ.ಎಸ್. ನಾಯಕ್ ಅಥವಾ ದೂರವಾಣಿ ಸಂಖ್ಯೆ 0821-2515944 ಸಂಪರ್ಕಿಸಲು ತಿಳಿಸಿದೆ.
ನಗದು ಬಹುಮಾನ
ಚಿಕ್ಕಮಗಳೂರು: ಕಲೆ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 4 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಮತ್ತು 10 ಸಾವಿರ ರೂ. ನಗದು ಬಹುಮಾನ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 4 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 1ನೇ ಮಹಡಿ, ಜಿಲ್ಲಾ ಪಂಚಾಯಿತಿ ಕಟ್ಟಡ, ಚಿಕ್ಕಮಗಳೂರು ದೂರವಾಣಿ ಸಂಖ್ಯೆ 08262-220930 ಸಂಪರ್ಕಿಸಲು ತಿಳಿಸಿದೆ.
ಸಾಲಕ್ಕಾಗಿ ಅರ್ಜಿ
ಚಿಕ್ಕಮಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಸ್ವಯಂ ಉದ್ಯೋಗ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ವೈಯಕ್ತಿಕ ಕೊಳವೆ ಬಾವಿ ಯೋಜನೆ, ತೆರೆದ ಬಾವಿ ಯೋಜನೆ, ಭೂ ಒಡೆತನ ಯೋಜನೆ, ಮೈಕ್ರೋಕ್ರೆಡಿಟ್ (ಕಿರುಸಾಲ) ಯೋಜನೆಗಳಿಗೆ ಸಾಲ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 19 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ಕೊಠಡಿ ಸಂಖ್ಯೆ 25, ಜಿಲ್ಲಾ ಪಂಚಾಯಿತಿ ಕಟ್ಟಡ, ಚಿಕ್ಕಮಗಳೂರು ಅಥವಾ ಸಂಬಂಧಪಟ್ಟ ನಿಗಮದ ತಾ.ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ಇವರನ್ನು ಸಂಪರ್ಕಿಸಲು ತಿಳಿಸಿದೆ.