ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಳಸ ಇನಾಂ ಭೂಮಿ ತೆರವಿಗೆ ಆಕ್ರೋಶ

Rashmi Kasaragodu
Updated On : 26 Jun 2014, 11:32 am

ಪೇರಿ ಕಿತ್ತ ಅಧಿಕಾರಿಗಳು

ಮೂಡಿಗೆರೆ: ಕಳಸ ಇನಾಂ ಭೂಮಿ ತೆರವು ಪ್ರಕ್ರಿಯೆ ಕಳಸದಲ್ಲಿ ಬುಧವಾರ ಮತ್ತೆ ಮುಂದುವರೆದಿದ್ದು, ಇನಾಂ ಸಂತ್ರಸ್ತರು, ಇನಾಂ ಹೋರಾಟ ಸಮಿತಿ, ಇನಾಂ ಭೂಮಿ ಕಾವಲು ಪಡೆಯ ಸದಸ್ಯರ ಪ್ರತಿರೋಧದಿಂದ ಇನಾಂ ಭೂಮಿ ತೆರವು ಪ್ರಕ್ರಿಯೆ ಸ್ಥಗಿತಗೊಂಡಿತು.
ಯಾವುದೆ ಮಾಹಿತಿ ನೀಡದೇ ಅರಣ್ಯ ಇಲಾಖೆ ಬುಧವಾರ ಏಕ ಕಾಲದಲ್ಲಿ ಮೂರು ಕಡೆ ಇನಾಂ ತೆರವು ಪ್ರಕ್ರಿಯೆ ಕೈಗೊಂಡಿತ್ತು. ಇದರಲ್ಲಿ ಮಾವಿನಕೆರೆ ಗ್ರಾಮದ ಸರ್ವೆ ನಂ. 825 ಅತ್ತಿಕುಡಿಗೆ ನಾಗೇಶ್ ರಾವ್ ಅವರ 20ಎಕರೆ, ತೋಟದೂರು ಗ್ರಾಮದ ಸರ್ವೆ ನಂ. 30 ತಲಗೋಡು ತಾರಿಕೊಂಡ ಅನಂತಯ್ಯರವರ 5.38ಎಕರೆ, ಹಾಗೂ ಮಾವಿನಕೆರೆ ಗ್ರಾಮದ ಸರ್ವೆ ನಂ 314 ರ ಕಾರಗದ್ದೆ ಆಗಸ್ಟೀನ್ ಎಂಬುವವರ 3ಎಕ್ರೆ ಭೂಮಿಯನ್ನು ತೆರವು ಮಾಡಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು.
ಮೂರು ತಂಡಗಳಾಗಿ ಕಾರ್ಯಾಚರಣೆಗೆ ಇಳಿದ ಇಲಾಖೆ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ನಾಗೇಶ್ ರಾವ್ ಹಾಗೂ ಅನಂತಯ್ಯಅವರ ಜಮೀನನ್ನು ತೆರವು ಮಾಡಲಾಯಿತು. ಇಲ್ಲಿ ತೆರವು ಮಾಡುವ ವಿಚಾರ ಸಂತ್ರಸ್ತರಿಗೆ ಗೊತ್ತಾಗಲಿಲ್ಲ. ಆದರೆ ಕಾರಗದ್ದೆ ಆಗಸ್ಟೀನ್ ಅವರ ಜಮೀನನ್ನು ತೆರವು ಮಾಡುವ ವಿಚಾರ ತಿಳಿಯುತ್ತಿದ್ದಂತೆ ಇನಾಂ ಕಾವಲು ಪಡೆ, ಇನಾಂ ಹೋರಾಟ ಸಮಿತಿ ಹಾಗೂ ಇನಾಂ ಸಂತ್ರಸ್ತರು ಸ್ಥಳಕ್ಕೆ ಧಾವಿಸಿ ಇನಾಂ ಭೂಮಿಯನ್ನು ತೆರವು ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಇನಾಂ ಸಂತ್ರಸ್ಥರು ಸರ್ಕಾರ ಒಂದು ಕುಟುಂಬಕ್ಕೆ 10 ಎಕ್ರೆ ಭೂಮಿಯನ್ನು ಮಂಜೂರು ಮಾಡುವ ತೀರ್ಮಾನದ ಹಂತದಲ್ಲಿದೆ. ಆದ್ದರಿಂದ ಸರ್ಕಾರದ ಸ್ಪಷ್ಟ ನಿಲುವು ನೀಡುವವರೆಗೆ ಯಾವುದೇ ಕಾರಣಕ್ಕೂ ತೆರವು ಮಾಡಬಾರದು ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಕಳಸ ಆರ್‌ಎಪ್‌ಒ ಪ್ರಹ್ಲಾದ್, ನಾವು ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಿದ್ದೇವೆ. ಕೋರ್ಟ್ ಆದೇಶ ಮಾಡಿ 2 ವರ್ಷವಾಗಿದೆ ಇಷ್ಟು ದಿನ ಇಲಾಖೆ ಕೂಡ ಜನರಿಗೆ ಸ್ಪಂದಿಸಿದೆ. ಆದರೆ ಈಗ ನ್ಯಾಯಲಯ 27ರ ಒಳಗೆ ಇನಾಂ ಭೂಮಿಯನ್ನು ತೆರವು ಮಾಡಲು ಸೂಚಿಸಿದೆ. ಆದ್ದರಿಂದ ನಾವು ತೆರವು ಮಾಡಲು ಮುಂದಾಗಿದ್ದೇವೆ ಎಂದರು.
ವಿವಿಧ ಗ್ರಾಮಗಳಿಂದ ಜಮಾಯಿಸಿದ ಸುಮಾರು 200ಕ್ಕೂ ಹೆಚ್ಚು ಜನ ಇನಾಂ ಸಂತ್ರಸ್ತರು ಇನಾಂ ಭೂಮಿ ವಿಚಾರವಾಗಿ ಯಾರು ನ್ಯಾಯಲಯದ ಮೆಟ್ಟಲು ಏರಿದ್ದಾರೆ ಅಂತವರ ಭೂಮಿಯನ್ನು ಮೊದಲು ತೆರವು ಮಾಡಿ. ಅಲ್ಲದೆ ಈಗ ಹೈಕೋರ್ಟ್ ತೆರವಿಗೆ ಆದೇಶ ಮಾಡಿರುವುದು ಆದರೆ ನಮಗೆ ಸುಪ್ರಿಂ ಕೋರ್ಟ್‌ಗೆ ಹೋಗಲು ಅವಕಾಶವಿದೆ. ಮೊದಲೇ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಸರಿಯಲ್ಲ. ನಾವು ಸಾಯೋಕೆ ಸಿದ್ದರಾಗಿ ಇಲ್ಲಿಗೆ ಬಂದಿದ್ದೇವೆ. ಕಾರ್ಯಾಚರಣೆ ಕೈ ಬಿಡದಿದ್ದಲ್ಲಿ ಇಲ್ಲಿ ನಾವು ಸಾಯುತ್ತೇವೆ. ನಿಮ್ಮನ್ನು ಸಾಯಿಸುತ್ತೇವೆ ಅದಕ್ಕೆ ಅವಕಾಶ ಕೊಡಬೇಡಿ ಎಂದು ಉದ್ರಿಕ್ತರಾದರು.
ಪರಿಸ್ಥಿತಿಯ ಗಂಭೀರತೆ ಅರಿತ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಿಲ್ಲಿಸಿದರು.  ಕೆ.ಎಲ್.ವಾಸು, ಸತೀಶ್ ಕಾರಗದ್ದೆ, ಸಂತೋಷ್ ಹಿನಾರಿ, ರಫೀಕ್, ಹೇಮಂತ್, ಜ್ವಾಲನಯ್ಯ, ಶಶಿಕಾಂತ್, ಉಷಾ,ಮಮ್ತಾಜ್,ಧರಣೇಂದ್ರ, ಸುರೇಶ್,ಭಾಸ್ಕರ್,ವಿಶ್ವನಾಥ್ ಗೌಡ, ಸುದೀರ್ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement