ಕಾರು ಹತ್ತಿಸಿ ಕೊಲ್ಲಲು ಯತ್ನ
ಚಿಕ್ಕಮಗಳೂರು: ಕೌಟುಂಬಿಕ ಕಲಹದ ವೈಮನಸ್ಸಿನಿಂದಾಗಿ ವ್ಯಕ್ತಿಯೊಬ್ಬನ ಮೇಲೆ ಕಾರು ಹಾಯಿಸಿ ಆತನನ್ನು ಕೊಲೆ ಮಾಡುವ ವಿಫಲ ಯತ್ನ ನಡೆಸಿರುವ ಘಟನೆ ನಗರದ ತಿಲಕ್ ಪಾರ್ಕ್ ಬಳಿ ಬುಧವಾರ ಹಡಹಗಲೇ ನಡೆದಿದೆ.
ಈ ಘಟನೆಯಲ್ಲಿ ಗಾಯಗೊಂಡಿರುವ ಮಹಮದ್ ಸೀರಾಜ್ ಹುಸೇನ್ ಎಂಬವರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ: ಮಹಮದ್ ಸೀರಾಜ್ ಹುಸೇನ್ ಹಾಗೂ ಪರ್ವೀನ್ ಅವರ ವಿವಾಹ ಕಳೆದ ಒಂದೂವರೆ ವರ್ಷದ ಹಿಂದೆ ನಡೆದಿತ್ತು. ಪತ್ನಿ ಪರ್ವೀನ್ ಅವರು ಹುಸೇನ್ ಅವರ ಮನೆಯಲ್ಲಿ ಇರಲು ನಿರಾಕರಿಸಿ ಬೇರೆ ಮನೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಜತೆಗೆ ಹುಸೇನ್ ಅವರ ತಂದೆ, ತಾಯಿಗೆ ಅವರು ನೋಡಿಕೊಳ್ಳುತ್ತಿರಲಿಲ್ಲ.
ಈ ಕೌಟುಂಬಿಕ ಕಲಹ ಈ ಹಿಂದೆ ಪೊಲೀಸ್ ಠಾಣೆಯ ಮೆಟ್ಟಿಲು ಏರಿತ್ತಾದರೂ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಆಗಿರಲಿಲ್ಲ. ಇದರಿಂದಾಗಿ ದಂಪತಿಗಳ ಕಲಹ ನಗರದ ತಿಲಕ್ ಪಾರ್ಕ್ ಬಳಿ ಇರುವ ಕೌಟುಂಬಿಕ ಸಲಹಾ ಕೇಂದ್ರಕ್ಕೆ ತಲುಪಿತು.
ಬುಧವಾರದಂದು ದಂಪತಿ ಕರೆಸಿ ಸಮಾಲೋಚನೆ ನಡೆಸಿ ಹೊರಬರುವ ವೇಳೆಗೆ ಸೀರಾಜ್ ಹುಸೇನ್ ತನ್ನ ದ್ವಿಚಕ್ರ ವಾಹನ ಏರುತ್ತಿದ್ದಂತೆ ಪರ್ವೀನ್ ಅವರ ಸಹೋದರ ಇರ್ಫಾನ್ ಕಾರಿನಲ್ಲಿ ಅತಿ ಜೋರಾಗಿ ಬಂದು, ಸೀರಾಜ್ ಹುಸೇನ್ ಮೈಮೇಲೆ ಹತ್ತಿಸಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಹುಸೇನ್ ಪ್ರಾಣಾಪಾಯದಿಂದ ಪಾರಾಗಿದ್ದು, ಆತನಿಗೆ ಸಣ್ಣ- ಪುಟ್ಟ ಗಾಯಗಳಾಗಿದ್ದು, ಆತನನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.
ಕೌಟುಂಬಿಕ ಸಲಹಾ ಕೇಂದ್ರದ ಎದುರು ನಡೆದಿರುವ ಈ ಘಟನೆ ಸಿಸಿ ಕ್ಯಾಮೆರದಲ್ಲಿ ಸೆರೆ ಹಿಡಿಯಲಾಗಿದ್ದು, ಸೀರಾಜ್ ಹುಸೇನ್ ಮೇಲೆ ಕಾರ್ ಹತ್ತಿಸಿದ ಇರ್ಫಾನ್, ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಪರ್ವೀನ್ ಅವರ ತಂದೆ ಬಸೀರ್ ಅಹಮದ್ ಹಾಗೂ ಇತರರಾದ ನವೀದ್ ಹಾಗೂ ಶಾಹೀದ್ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.