ತ್ಯಾಜ್ಯ ವಿಲೇವಾರಿಗೆ ಬೇಕು ಶಾರದೆ ಕೃಪಾಕಟಾಕ್ಷ
ನೆಮ್ಮಾರ್ ಅಬೂಬಕರ್
ಶೃಂಗೇರಿ: ಶೃಂಗೇರಿ ಜಿಲ್ಲೆಯ ಪ್ರಸಿದ್ಧ ಸ್ಥಳಗಳಲ್ಲೊಂದು. ಇಲ್ಲಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಪಟ್ಟಣ ಸ್ವಚ್ಛವಾಗಿದೆಯೇ ಎಂಬ ಮಾತಿಗೆ ತ್ಯಾಜ್ಯ ವಿಲೇವಾರಿ ಮಾತ್ರ ಸಮರ್ಪಕವಾಗಿಲ್ಲ ಎಂಬ ಉತ್ತರ ಸಿಗುತ್ತದೆ.
ಶೃಂಗೇರಿ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಪ್ಲಾಸ್ಟಿಕ್ ಬಳಸಿದವರಿಗೆ ನಿಗದಿತ ದಂಡವನ್ನೂ ವಿಧಿಸಲಾಗುತ್ತಿದೆ. ಪಟ್ಟಣ ಪಂಚಾಯಿತಿಯಿಂದ ದಿನನಿತ್ಯ ಮನೆ ಮನೆ ಕಸ ಸಂಗ್ರಹವಾಗುತ್ತದೆ. ಒಂದೆಡೆ ಕಸ ವಿಲೇವಾರಿಯಾಗುತ್ತಿದ್ದರೆ, ಮತ್ತೆ ಕೆಲವೆಡೆಗಳಲ್ಲಿ ಕಂಡಕಂಡಲ್ಲಿ ಕಸದ ರಾಶಿಗಳು ಸೃಷ್ಟಿಯಾಗುತ್ತಿವೆ. ಚರಂಡಿ ನೀರಿನ ಗಬ್ಬುವಾಸನೆ, ತ್ಯಾಜ್ಯ ವಸ್ತುಗಳ ರಾಶಿ, ನಿರಂತರ ಸ್ಥಳೀಯರನ್ನಷ್ಟೇ ಅಲ್ಲದೆ, ಪ್ರವಾಸಿಗರನ್ನೂ ಕಾಡುತ್ತಿದೆ.
ಹನುಮಂತನಗರದ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. 5 ವರ್ಷಗಳ ಹಿಂದೆ ಘಟಕ ಆರಂಭಿಸಲಾಗಿದ್ದು, ಕೆರೆದಂಡೆ ಸರ್ಕಲ್, ನೂತನ ಬಸ್ ನಿಲ್ದಾಣ, ಹಳೇ ಬಸ್ಟಾಂಡ್, ಭಾರತೀ ಬೀದಿ, ಹರಿಹರ ಬೀದಿ, ಶಾರದಾ ನಗರ, ವೆಲ್ಕಮ್ ಗೇಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಿತ್ಯ ಕಸ ಸಂಗ್ರಹವಾಗುತ್ತಿದೆ. 5 ವರ್ಷಗಳಿಂದ ಮನೆ ಮನೆ ಕಸ ಸಂಗ್ರಹ ಮಾಡಲಾಗುತ್ತಿದೆ. ಪಟ್ಟಣ ಪಂಚಾಯಿತಿ ಮನೆ ಮನೆಗೆ ಕಸ ಸಂಗ್ರಹದ ಬಕೆಟ್ ನೀಡಿತ್ತು. ದಿನನಿತ್ಯ 2 ಟ್ರಾಕ್ಟರ್ ಮೂಲಕ ಮನೆ ಮನೆ ಕಸ ಸಂಗ್ರಹ ಮಾಡಿ ಪಟ್ಟಣದ ಹನುಮಂತ ನಗರದ ಘನತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಇಲ್ಲಿ ಸಂಗ್ರಹಿಸಿದ ಕಸದಲ್ಲಿ ಕರಗದ ಪ್ಲಾಸ್ಟಿಕ್ ವಸ್ತುಗಳನ್ನು ಪುನರ್ ಬಳಕೆ ವಸ್ತು ತಯಾರಿಕೆಗೆ ನೀಡಲಾಗುತ್ತಿದೆ. ಇನ್ನು ಕರಗುವ ವಸ್ತುಗಳನ್ನು ಮಣ್ಣಿನಲ್ಲಿ ಹೂಳಲಾಗುತ್ತಿದೆ.
ನಿತ್ಯ 11 ವಾರ್ಡ್ಗಳಿಂದ ಸುಮಾರು ಎರಡೂವರೆ ಟನ್ ಕಸ ಸಂಗ್ರಹ ಆಗುತ್ತದೆ. ಒಟ್ಟು 18 ಗುತ್ತಿಗೆ ನೌಕರರು, 4 ಮಂದಿ ಕಾಯಂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಗಾಂಧಿ ಮೈದಾನ, ಸಂತೆ ಮಾರುಕಟ್ಟೆ, ಕುರುಬಗೇರಿ ರಸ್ತೆ, ಬಳಿ ಕಸ ಸಂಗ್ರಹ ಆಗುತ್ತಿದೆ. ಬಹುತೇಕ ಕಡೆ ಸ್ವಚ್ಛತೆ ಕೊರತೆ ಕಂಡುಬರುತ್ತಿದೆ. ಬಸ್ ನಿಲ್ದಾಣ, ಬಸ್ ತಂಗುದಾಣ, ಗಾಂಧಿ ಮೈದಾನ, ಸಂತೆ ಮಾರುಕಟ್ಟೆ ಇತ್ಯಾದಿ ಸ್ಥಳಗಳಲ್ಲಿ ಸ್ವಚ್ಛ ವಾತಾವರಣ ನಿರ್ಮಾಣಕ್ಕೆ ಇನ್ನಷ್ಟು ಶ್ರಮ ಅಗತ್ಯವಾಗಿದೆ.
ಗಾಂಧಿ ಮೈದಾನದಲ್ಲಿ ವಿಪರೀತ ತ್ಯಾಜ್ಯ ಸಂಗ್ರಹವಾಗುತ್ತಿದೆ. ತುಂಗೆಯ ದಡದಲ್ಲಿ ಕಸದ ಗುಡ್ಡೆಗಳೇ ಸೃಷ್ಟಿಯಾಗಿವೆ. ಪ್ರವಾಸಿ ವಾಹನಗಳು ಮೈದಾನದಲ್ಲಿಯೇ ನಿಲುಗಡೆ ಆಗುವುದರಿಂದ ಹಾಗೂ ಅಂಗಡಿ ಮುಂಗಟ್ಟುಗಳು ನದಿ ಸಮೀಪವೇ ಇರುವುದರಿಂದ ತ್ಯಾಜ್ಯ ಹೆಚ್ಚು ಸೃಷ್ಟಿಯಾಗಿ, ತ್ಯಾಜ್ಯವೆಲ್ಲ ತುಂಗೆ ಮಡಿಲು ಸೇರುತ್ತಿದೆ. ಕಳೆದ ಕೆಲ ವರ್ಷಗಳಿಂದ ತುಂಗೆಯ ದಡದಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಬೀಳುತ್ತಿದ್ದರೂ ತಡೆಗಟ್ಟುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ತುಂಗೆಯಲ್ಲಿ ಪ್ರವಾಹ ಬಂದಾಗ ಒಮ್ಮೆ ಮೈದಾನವೆಲ್ಲ ಸ್ವಚ್ಛವಾಗಿ ತ್ಯಾಜ್ಯ ಕೊಚ್ಚಿಹೋದರೆ, ಮತ್ತೆ ಬೇಸಿಗೆಯಲ್ಲಿ ತ್ಯಾಜ್ಯದ ರಾಶಿಗಲೇ ಗೋಚರಿಸುತ್ತವೆ. ಇದು ತಪ್ಪಬೇಕಿದೆ.
13 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ನೌಕರರು ಕಸ ಸಂಗ್ರಹ, ತ್ಯಾಜ್ಯ ವಿಲೇವಾರಿ ಕೆಲಸದಲ್ಲಿ ತೊಡಗಿದ್ದು, ಒಟ್ಟು 18 ಮಂದಿ ಸದ್ಯ ಗುತ್ತಿಗೆ ನೌಕರರಿದ್ದಾರೆ. ಬಹುತೇಕ ಕಡೆ ಕಸದ ರಾಶಿಯೇ ಇದೆ. ಆದರೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳ ಪ್ರಕಾರ, ಕಸದ ಸಂಗ್ರಹ, ವಿಲೇವಾರಿ ಸರಿಯಾಗಿದೆಯಂತೆ. ಒಟ್ಟಿನಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಸಮರ್ಪಕ ತ್ಯಾಜ್ಯವಿಲೇವಾರಿಗೆ ಇನ್ನಷ್ಟು ಕಠಿಣ ಕ್ರಮ ಅಗತ್ಯವಾಗಿದೆ.