ದಲಿತ ಎಂಬುದು ಜಾತಿಯಲ್ಲ: ಶಿವಪ್ರಸಾದ್
ಚಿಕ್ಕಮಗಳೂರು: ದಲಿತ ಎಂಬುದು ಒಂದು ಜಾತಿಯಲ್ಲ, ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಯಾವ ಯಾವ ವರ್ಗದವರು ಹಿಂದುಳಿದಿದ್ದರೂ ಅವರೆಲ್ಲರೂ ದಲಿತರೆಂಬ ಭಾವನೆ ಡಾ. ಅಂಬೇಡ್ಕರ್ ಅವರದ್ದಾಗಿತ್ತು ಎಂದು ದಲಿತ ಕವಿ ಗೊಲ್ಲಳ್ಳಿ ಶಿವಪ್ರಸಾದ್ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಹೆಗ್ಗೋಡಿನ ನೀನಾಸಂ ಜನಮನದಾಟ ಕಲಾ ತಂಡದಿಂದ ಗುರುವಾರ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜೀವನ ಕುರಿತ ಬಾಬಾ ಸಾಹೇಬ್ ಅಂಬೇಡ್ಕರ್ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಈ ದೇಶದ ಎಲ್ಲಾ ವರ್ಗದ ಜನರಿಗಾಗಿ ಸಂವಿಧಾನ ರಚಿಸಿ ಕೊಟ್ಟಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ ಲೋಕ ಕಲ್ಯಾಣಕ್ಕಾಗಿ ತಮ್ಮ ಬದುಕು ಮುಡುಪಾಗಿಟ್ಟಿದ್ದರು. ಜಾತಿ ಮತ್ತು ಮತಗಳ ನಡುವಿರುವ ಕಂದಕ ದೂರ ಮಾಡಲು ಜಗತ್ತಿಗೆ ಹೊಸ ಸಂದೇಶ ನೀಡಿದ್ದರು. ಆದರೆ, ಇಂದು ಅಂಬೇಡ್ಕರ್, ಬುದ್ದ, ಕನಕದಾಸರು ಹಾಗೂ ಬಸವಣ್ಣರನ್ನು ಜಾತಿಗೇ ಸೀಮಿತವಾಗಿ ನೋಡುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಮಾತನಾಡಿ, ಅಂಬೇಡ್ಕರ್ ಈ ದೇಶಕ್ಕೆ ಸಂವಿಧಾನ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಡಿ.ಎ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ, ಜಿಪಂ ಮಾಜಿ ಅಧ್ಯಕ್ಷ ಎ.ಎನ್. ಮಹೇಶ್, ರೇಖಾ ಹುಲಿಯಪ್ಪಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ರಾಜೇಗೌಡ ಉಪಸ್ಥಿತರಿದ್ದರು. ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಯಲಗುಡಿಗೆ ಹೊನ್ನಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.