ಬಾರದ ಮಳೆ, ಬಾಡಿದ ಬೆಳೆ
ಆರ್. ತಾರಾನಾಥ್
ಚಿಕ್ಕಮಗಳೂರು: ಮುಂಗಾರು ಮಳೆ ಆರಂಭವಾಯಿತೆಂದರೆ ಇಲ್ಲಿ ಸದಾ ಬೀಸುವ ಥಂಡಿ ಗಾಳಿ, ಮನೆಯಲ್ಲೇ ಕಟ್ಟಿ ಹಾಕುವಂತ ಧಾರಾಕಾರವಾಗಿ ಸುರಿಯುವ ಮಳೆ. ಸೂರ್ಯನ ದರ್ಶನವಾಗದ ಆ ದಿನಗಳು.
- ಇಂದು, ಆ ದಿನಗಳು ನಮ್ಮ ಮನಸ್ಸಿನಲ್ಲಿ ಮಾತ್ರ ಉಳಿದುಕೊಂಡಿದೆ. ಆ ಕ್ಷಣಗಳನ್ನು ಮತ್ತೆ ಮತ್ತೆ ನೋಡಲು ಮುಂದೊಂದು ದಿನ ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಮಲೆನಾಡಿನ ಜನರ ಮುಂದೆ ಎದುರಾಗಿದೆ.
ಚಿಕ್ಕಮಗಳೂರು ಎಂದಾಕ್ಷಣ ಮಳೆಯ ಊರು, ಅಲ್ಲಿಗೆ ಮಳೆಗಾಲದಲ್ಲಿ ಕಾಲಿಡುವುದು ಬೇಡ ಎನ್ನುವವರೇ ಹೆಚ್ಚು ಮಂದಿ ಇದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಮುಂಗಾರಿನ ಚಿತ್ರಣ ಬದಲಾಗಿದೆ. ಮುಗಿನಲ್ಲಿ ಯಾವುದೇ ಮೂಲೆಯಲ್ಲೂ ಮೋಡ ಇಲ್ಲ. ಕಳೆದ ಒಂದು ವಾರದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೇಸಿಗೆಯಂತ ಬಿಸಿಲಿದ್ದು, ಮುಂಗಾರು ಮಳೆಯ ಬರುವಿಕೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿರುವ ರೈತರಲ್ಲಿ ಆತಂಕ ಮನೆ ಮಾಡಿದೆ.
ಕೈಕೊಟ್ಟ ಮಳೆ: ಆರಂಭದಲ್ಲಿ ಮುಂಗಾರು ಮಳೆ ರೈತರಿಗೆ ಕೈ ಕೊಟ್ಟಿದೆ. ಕಳೆದ ವರ್ಷ ಮಳೆ ಬಂದಿದ್ದ ಸಂದರ್ಭ ಹಾಗೂ ಪ್ರಮಾಣ ನೋಡಿದರೆ ವರುಣನ ಅವಕೃಪೆಗೆ ಮಳೆನಾಡು ಒಳಗಾಗಿದೆ.
ಮಳೆಗಾಲ ಆರಂಭದ ಮೊದಲು ಅಂದರೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮಳೆ ಬಂದರೆ ರೈತರಿಗೆ ತಮ್ಮ ಹೊಲಗಳ ಭೂಮಿಯನ್ನು ಹದ ಮಾಡಿಕೊಳ್ಳಲು ಅನುಕೂಲವಾಗಲಿದೆ. ಈ ವರ್ಷದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಿರೀಕ್ಷೆಗೂ ಮೀರಿ ಜಿಲ್ಲೆಯಲ್ಲಿ ಮಳೆ ಬಂದಿತು.
ಏಪ್ರಿಲ್ ತಿಂಗಳ ವಾಡಿಕೆ ಮಳೆ ಸರಾಸರಿ 399 ಮಿ.ಮೀ. ಆದರೆ, ಅದೇ ತಿಂಗಳಲ್ಲಿ ಬಂದ ಮಳೆ 605 ಮಿ.ಮೀ., ಮೇ ತಿಂಗಳ ವಾಡಿಕೆ ಮಳೆ 736 ಮಿ.ಮೀ. ಬಂದ ಮಳೆ 1369.8 ಮಿ.ಮೀ. ಅಂದರೆ ವಾಡಿಕೆಗೂ ಮೀರಿ ಮಳೆ ಬಂದಿದೆ. ಜೂನ್ ತಿಂಗಳ ವಾಡಿಕೆ ಮಳೆ 2196 ಮಿ.ಮೀ. ಆದರೆ, ಜೂ.25ರವರೆಗೆ ಬಂದ ಮಳೆ 1156.7 ಮಿ.ಮೀ. ಮಾತ್ರ. ಅಂದರೆ ಕಳೆದ ವರ್ಷ ಜೂನ್ ತಿಂಗಳಲ್ಲಿ 2734 ಮಿ.ಮೀ. ಮಳೆ ಬಂದಿತ್ತು.
ರೈತರು ಮೇ ತಿಂಗಳ ಕೊನೆಯಲ್ಲಿ ಹಾಗೂ ಜೂನ್ ತಿಂಗಳಲ್ಲಿ ಬಿತ್ತನೆ ಮಾಡುತ್ತಾರೆ. ಜಿಲ್ಲೆಯಲ್ಲಿ ಮುಂಗಾರಿನ ಬಿತ್ತನೆಯ ಗುರಿ 1.60 ಲಕ್ಷ ಹೆಕ್ಟರ್, ಆದರೆ, ಈವರೆಗೆ ಬಿತ್ತನೆಯಾಗಿರುವುದು 35 ಸಾವಿರ ಹೆಕ್ಟೇರ್ ಮಾತ್ರ. ಅವುಗಳಲ್ಲಿ ಪ್ರಮುಖವಾಗಿ ಎಣ್ಣೆಕಾಳು ಬೆಳೆಗಳ ಬಿತ್ತನೆ ಕಾರ್ಯ ನಡೆದಿದೆ.
ಇದೀಗ ಮುಸುಕಿನ ಜೋಳ ಬಿತ್ತನೆಯಾಗಬೇಕಾಗಿತ್ತು. ಮಳೆಯ ಕೊರೆಯಿಂದಾಗಿ ಕಳೆದ 15 ದಿನಗಳಿಂದ ರೈತರು ಬಿತ್ತನೆ ಕಾರ್ಯವನ್ನು ಸ್ಥಗಿತಗೊಳಿಸಿ, ಮಳೆಯ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇನ್ನೇನೂ ಜೂನ್ ತಿಂಗಳು ಮುಗಿಯುವ ಹಂತಕ್ಕೆ ಬಂದಿದ್ದು, ಜುಲೈ ತಿಂಗಳಲ್ಲಿ ಮಳೆ ಬಂದರೆ ಮಾತ್ರ ರೈತರು ರಾಗಿಯನ್ನು ಬಿತ್ತನೆ ಮಾಡಲಿದ್ದಾರೆ.
ಆಲೂಗಡ್ಡೆ ಬೆಳೆಗೆ ಹಿನ್ನಡೆ: ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಲೂಗಡ್ಡೆ ಪ್ರಮುಖ ಬೆಳೆಯ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ಈ ವರ್ಷದಲ್ಲಿ ಆಲೂಗಡ್ಡೆ ಬಿತ್ತನೆಯ ಗುರಿ 2800 ಹೆಕ್ಟೇರ್, ಈವರೆಗೆ 2100 ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯ ನಡೆದಿದೆ.
ಜೂನ್ ಮೊದಲ ವಾರದಲ್ಲಿ ಆಲೂಗಡ್ಡೆ ಬಿತ್ತನೆ ಕಾರ್ಯ ನಡೆದಿದ್ದು, ಭೂಮಿಯಲ್ಲಿ ತೇವಾಂಶ ಇರುವುದರಿಂದ ಬೀಜಗಳು ಮೊಳಕೆಯಾಗಿವೆ. ಕೆಲವೆಡೆ ಮೊಳಕೆಯ ಪ್ರಮಾಣ ಚೆನ್ನಾಗಿದೆ. ಆದರೆ, ಸತತವಾಗಿ 20 ದಿನಗಳ ಕಾಲ ಮಳೆ ಕೈ ಕೊಟ್ಟಿದ್ದರ ಪರಿಣಾಮ ತೇವಾಂಶ ಕಡಿಮೆಯಾಗಿದ್ದು, ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳವಾಗಿದ್ದರಿಂದ ಮೊಳಕೆಗಳ ಬೆಳವಣಿಗೆ ಕುಂಠಿತವಾಗಿದೆ. ಹಲವೆಡೆ ಮೊಳಕೆಗಳು ಒಣಗುವ ಹಂತಕ್ಕೆ ಬಂದಿದೆ.
ಇನ್ನೊಂದು ವಾರದೊಳಗೆ ಮಳೆ ಬಂದರೆ ಮಾತ್ರ ಅವುಗಳು ಚೇತರಿಸಿಕೊಳ್ಳಲಿವೆ. ಇಲ್ಲದೆ ಹೋದರೆ, ಆಲೂಗಡ್ಡೆ ಬಿತ್ತನೆ ಮಾಡಿರುವ ರೈತರು ನಷ್ಟಕ್ಕೆ ಒಳಗಾಗಲಿದ್ದಾರೆ.