ವೈವಿಧ್ಯಮಯ ಭಾಷಣ ಸ್ಪರ್ಧೆ ವಿಜೇತರು
ಚಿಕ್ಕಮಗಳೂರು: ರಾಷ್ಟ್ರೀಯ ಭಾವೈಕ್ಯತಾ ಜಾಗೃತಿ ವೇದಿಕೆ ವತಿಯಿಂದ ನಗರದ ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವೈವಿಧ್ಯಮಯ ಭಾಷಣ ಸ್ಪರ್ಧೆಗಳಲ್ಲಿ ಈ ಕೆಳಕಂಡ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ. ಮೊದಲನೆಯ ಹಂತದ ಭಾಷಣ ಸ್ಪರ್ಧೆಯಲ್ಲಿ ಟಿಎಂಎಸ್‌ನ ಎಸ್. ಹೃತ್ವಿಕ್ ಮೊದಲ ಬಹುಮಾನ, ವಾಸವಿ ಶಾಲೆಯ ಕೆ. ತೇಜಶ್ರೀ ದ್ವಿತೀಯ, ಸೆಂಟ್ ಜೋಸೆಫ್ ಶಾಲೆಯ ಬಿ. ಪೂಜಾ ತೃತೀಯ ಬಹುಮಾನಗಳನ್ನು ಹಾಗೂ ಎರಡನೆಯ ಹಂತದ ಭಾಷಣ ಸ್ಪರ್ಧೆಯಲ್ಲಿ ವಾಸವಿ ಶಾಲೆಯ ಎಚ್.ಎಸ್. ಅಮೃತಾ ಮೊದಲ ಬಹುಮಾನ, ಸೆಂಟ್ ಜೋಸೆಫ್ ಶಾಲೆಯ ಬಿ.ಎಂ. ಶಾಲಿನಿ ದ್ವಿತೀಯ, ಕೇಂಬ್ರಿಡ್ಜ್ ಶಾಲೆಯ ಕೆ.ಕೆ. ಸಿಂಚನ ತೃತೀಯ ಬಹುಮಾನ ಪಡೆದಿದ್ದಾರೆ. ಬಸವನಹಳ್ಳಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸುಮಿತ್ರಮ್ಮ ಬಹುಮಾನ ವಿತರಿಸಿದರು, ವೇದಿಕೆಯ ಅಧ್ಯಕ್ಷರಾದ ರಮೇಶ್ ಬೊಂಗಾಳೆ, ಪ್ರಧಾನ ಕಾರ್ಯದರ್ಶಿ ಕೆ.ಎ. ಮಂಜುನಾಥ್, ಉಪಾಧ್ಯಕ್ಷರಾದ ಆರತಿ ಮಹೇಶ್ ಉಪಸ್ಥಿತರಿದ್ದರು. ಮಾನಸ ಪ್ರಾರ್ಥಿಸಿದರು, ವಿದ್ಯಾ ಧನಂಜೆಯಗೌಡ ಸ್ವಾಗತಿಸಿದರು. ಹೇಮಂತ್ ಕುಮಾರ್ ವಂದಿಸಿದರು.
ಸ್ವಯಂ ನಿವೃತ್ತಿ ಪಡೆದ ನಾರಾಯಣಗೆ ಬೀಳ್ಕೊಡುಗೆ
ಮೂಡಿಗೆರೆ: ತಾಲೂಕಿನ ಕಳಸ ಹೋಬಳಿಯ ಬಾಳೆಹೊಳೆ ಅಂಚೆ ಕಚೇರಿಯಲ್ಲಿ ಅಂಚೆ ನೌಕರರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಆರ್. ನಾರಾಯಣ ಅವರನ್ನು ಬೀಳ್ಕೊಡಲಾಯಿತು.
ಬುಧವಾರ ಬಾಳೆಹೊಳೆ ಅಂಚೆ ಕಚೇರಿಯಲ್ಲಿ ನಡೆದ ಸರಳ ಬೀಳ್ಕೊಡುಗೆ ಸಮಾರಂಭದಲ್ಲಿ ನಾರಾಯಣ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ನಂತರ ಸಮಾರಂಭದಲ್ಲಿ ಮಾತನಾಡಿದ ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಸದಸ್ಯ ಗಜೇಂದ್ರ ಗೊರಸುಕುಡಿಗೆ, ಸುಮಾರು29 ವರ್ಷಗಳ ದೀರ್ಘಕಾಲ ಸೇವೆ ಹಾಗೂ ಐದು ಕಂದಾಯ ಗ್ರಾಮಸ್ಥರ ನಿರಂತರ ಸಂಪರ್ಕ ವಿಶ್ವಾಸ ಸಂಪಾದಿಸಿ, ಪ್ರಾಮಾಣಿಕರಾಗಿ ಕೆಲಸ ಸಲ್ಲಿಸಿದ ಇವರ ಆದರ್ಶ ವ್ಯಕ್ತಿತ್ವ ಇತರರಿಗೂ ಮಾದರಿಯಾಗಲಿ ಎಂದರು. ಸಬ್ ಪೋಸ್ಟ್ ಮಾಸ್ಟರರಾದ ಭವಾನಿ ಶಂಕರ್, ಬಿಜೆಪಿ ಹೋಬಳಿ ಅಧ್ಯಕ್ಷ ನಾಗೇಶ್ ಭಟ್, ನಾಗಭೂಷಣ್, ಅನಿಲ್‌ಕುಮಾರ್, ಮಹಾಬಲ, ನಿರಂಜನ್ ಪ್ರಭು, ಸುಂದರ, ಮೋಹನ, ರತ್ನಾಕರ ಇದ್ದರು.