ನೀಡಿಲ್ಲ ನಯಾಪೈಸೆ ನೆಲಗಂದಾಯ
ಚಿಕ್ಕಮಗಳೂರು: ನಗರದ ಹೊರವಲಯದಲ್ಲಿರುವ ಗೌಡ್ನಳ್ಳಿ ಕೈಗಾರಿಕೆಗಳ ಮಾಲೀಕರು ಹಲವು ವರ್ಷಗಳಿಂದ ಅದರ ವ್ಯಾಪ್ತಿಯಲ್ಲಿರುವ ಅಂಬಳೆ ಗ್ರಾಮ ಪಂಚಾಯ್ತಿಗೆ ಈವರೆಗೆ ಒಂದೇ ಒಂದು ರುಪಾಯಿ ನೆಲಗಂದಾಯ ಪಾವತಿ ಮಾಡಿಲ್ಲ.
ಇಲ್ಲಿನ 144 ಎಕರೆ ಪ್ರದೇಶದಲ್ಲಿ 41 ಕೈಗಾರಿಕೆಗಳಿವೆ. ನಿಮಯದ ಪ್ರಕಾರ, ಅವುಗಳು ಪ್ರತಿ ವರ್ಷ ನೆಲಗಂದಾಯ, ನೀರಿನ ಕಂದಾಯ ಪಾವತಿ ಮಾಡಬೇಕು. ಆದರೆ, ಈವರೆಗೂ ನೆಲಗಂದಾಯ ಪಾವತಿಸಿಲ್ಲ.
ನಿಯಮ ಪ್ರಕಾರ ವಾಣಿಜ್ಯ ಹಾಗೂ ಕೈಗಾರಿಕೆಗಳು ಕಂದಾಯ ಪಾವತಿ ಮಾಡಬೇಕು.
ಇಲ್ಲಿನ ಕೈಗಾರಿಕೆಗಳಿಗೆ ಅಂಬಳೆ ಗ್ರಾಮ ಪಂಚಾಯ್ತಿಯಿಂದ ನೀರಿನ ವ್ಯವಸ್ಥೆ ಮಾಡಿಕೊಡುವ ಕೆಲಸ ಆಗಿಲ್ಲ. ಆದುದರಿಂದ ನೀರಿನ ಕಂದಾಯ ವಸೂಲಿ ಮಾಡಲು ಯಾವುದೇ ಕ್ರಮ ವಹಿಸಲು ಅವಕಾಶ ಇಲ್ಲ. ಆದರೆ, ನೆಲಗಂದಾಯ ಕಡ್ಡಾಯವಾಗಿ ಪಾವತಿ ಮಾಡಬೇಕು. ಆದರೆ, ಇಲ್ಲಿನ ಕೈಗಾರಿಕೆ ಮಾಲೀಕರು ನೆಲಗಂದಾಯ ಪಾವತಿಸಿಲ್ಲ.
ಅವರು ನೆಲಗಂದಾಯ ಪಾವತಿಸಿಲ್ಲ ಎಂದು ಅಂಬಳೆ ಗ್ರಾಮ ಪಂಚಾಯ್ತಿಯವರು ಸುಮ್ಮನೆ ಕೂರಬಾರದಿತ್ತು. ಪ್ರತಿ ವರ್ಷ ಕಂದಾಯ ವಸೂಲಿ ಮಾಡಬೇಕಾಗಿತ್ತು. ಅಧಿಕೃತ ಮೂಲಗಳ ಪ್ರಕಾರ ಗ್ರಾಮ ಪಂಚಾಯ್ತಿಯವರು ಯಾವ ವರ್ಷವೂ ಕೈಗಾರಿಕೆ ಮಾಲೀಕರಿಗೆ ಕಂದಾಯ ಪಾವತಿಸುವಂತೆ ನೋಟಿಸ್ ಜಾರಿ ಮಾಡಿಲ್ಲ, ಆದುದರಿಂದ ಮಾಲೀಕರು ಸಹ ಕಂದಾಯ ಪಾವತಿಸುವ ಪ್ರಯತ್ನ ಮಾಡಿಲ್ಲ.
ಕಾನೂನಿನಲ್ಲಿ ಅವಕಾಶ: ಅಂಬಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೌಡ್ನಳ್ಳಿಯ 144 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ಪ್ರದೇಶ ಇದ್ದು, ಈ ಪ್ರದೇಶವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ತನ್ನ ವಶಕ್ಕೆ ತೆಗೆದುಕೊಂಡಿದೆ. ಇಲ್ಲಿ ಈವರೆಗೆ 41 ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಾಗಿದೆ.
ಇಲ್ಲಿ ಯಾವುದೇ ಕೈಗಾರಿಕೆ ಸ್ಥಾಪನೆ ಮಾಡಬೇಕಾದರೆ ಹಾಸನದಲ್ಲಿರುವ ಕೆಐಎಡಿಬಿಯಿಂದ ಅನುಮತಿ ಪಡೆಯಬೇಕು. ಇದಕ್ಕಾಗಿ ತಗಲುವ ಶುಲ್ಕ ಪಾವತಿ ಮಾಡಬೇಕು. ಇಲ್ಲಿಗೆ ಬೇಕಾದ ರಸ್ತೆ, ನೀರು ಸೇರಿದಂತೆ ಇತರೆ ಮೂಲಭೂತ ಸವಲತ್ತುಗಳನ್ನು ಕೆಐಎಡಿಬಿ ನೀಡಲಿದೆ. ಈ ಕೆಲಸ ಮಂಡಳಿಯಿಂದ ಆಗಿದೆ. ಆದರೆ, ಇಲ್ಲಿ ಅಗತ್ಯವಿರುವಷ್ಟು ನೀರನ್ನು ಕೊಡಲು ಕೆಐಎಡಿಬಿಯಿಂದ ನೀಡಲು ಸಾಧ್ಯವಾಗಿಲ್ಲ. ಇದಕ್ಕಾಗಿ ಯಗಚಿಯಿಂದ ಚಿಕ್ಕಮಗಳೂರು ಸರಬರಾಜು ಆಗುತ್ತಿರುವ ಕುಡಿಯುವ ನೀರಿನ ಪೈಪ್ ಲೈನ್ ಮೂಲಕ ನೀರು ಕೊಡುವ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ತಡೆಯಾಗಿದೆ.
ನೆಲಗಂದಾಯ: ಯಾವುದೇ ಒಂದು ವಾಣಿಜ್ಯ ಕೇಂದ್ರ, ಕೈಗಾರಿಕೆ ಇರಲಿ. ಅದು, ಸಂಬಂಧಪಟ್ಟ ಸ್ಥಳೀಯ ಸಂಸೆ ಹಾಗೂ ಆಯಾ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ ನೆಲಗಂದಾಯ ಪಾವತಿ ಮಾಡಬೇಕು. ಪಂಚಾಯತ್ ರಾಜ್ ಕಾಯ್ದೆ 64 ಪ್ರಕಾರ ಗ್ರಾಮ ಪಂಚಾಯ್ತಿಗಳು ಕೈಗಾರಿಕೆಗಳಿಂದ ನೆಲಗಂದಾಯ ವಸೂಲಿ ಮಾಡಬೇಕು. ಆದರೆ, ಅಂಬಳೆ ಗ್ರಾಮ ಪಂಚಾಯ್ತಿಯವರು ಈವರೆಗೆ ಇಲ್ಲಿನ ಕೈಗಾರಿಕೆಗಳಿಂದ ನೆಲಗಂದಾಯ ವಸೂಲಿ ಮಾಡಿಲ್ಲ.
ಹಣಕಾಸಿನ ಮುಗ್ಗಟ್ಟು: ಗ್ರಾಮ ಪಂಚಾಯ್ತಿಗಳು ಇತ್ತೀಚಿನ ವರ್ಷಗಳಲ್ಲಿ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿವೆ. ಗ್ರಾಮ ಪಂಚಾಯ್ತಿಗಳು ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ಬರುವ 13ನೇ ಹಣಕಾಸು ಹಾಗೂ ಅಭಿವೃದ್ಧಿ ಅನುದಾನದ ಮೇಲೆ ಅವಲಂಬಿತವಾಗಿವೆ. ಅಭಿವೃದ್ಧಿ ಅನುದಾನ ಗ್ರಾಮ ಪಂಚಾಯ್ತಿಗೆ ಬಿಡುಗಡೆ ಮಾಡುವ ವೇಳೆಯಲ್ಲಿ ಶೇ. 60 ರಷ್ಟು ಹಣವನ್ನು ವಿದ್ಯುತ್ ಬಳಕೆಗಾಗಿ ಕಡಿತಗೊಳಿಸಿ ಇನ್ನುಳಿದ ಹಣವನ್ನು ಪಾವತಿ ಮಾಡಲಾಗುತ್ತಿದೆ. ಈ ಅನುದಾನದಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಕುಡಿಯುವ ನೀರು ಸಂಪರ್ಕ ಹಾಗೂ ಸಿಬ್ಬಂದಿಗಳ ವೇತನಕ್ಕೆ ಪಾವತಿ ಮಾಡಲಾಗುತ್ತಿದೆ. ಇನ್ನು ಸಾರ್ವಜನಿಕರು ಸಹ ಕಾಲ ಕಾಲಕ್ಕೆ ಕಂದಾಯ ಪಾವತಿ ಮಾಡುತ್ತಿಲ್ಲ. ಇದಕ್ಕೆ ಕಾರಣ, ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇಂತಹ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯನ್ನು ಅಂಬಳೆ ಗ್ರಾಮ ಪಂಚಾಯ್ತಿಯೂ ಸಹ ಎದುರಿಸುತ್ತಿದೆ.
ತನ್ನ ವ್ಯಾಪ್ತಿಯಲ್ಲಿ 41 ಕೈಗಾರಿಕೆಗಳಿದ್ದು, ಅವುಗಳಿಂದ ನೆಲಗಂದಾಯವನ್ನು ಕಾಲ ಕಾಲಕ್ಕೆ ವಸೂಲಿಯಾಗಿದ್ದರೆ ಈ ಪಂಚಾಯ್ತಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗಾದರೂ ಚೇತರಿಸಿಕೊಳ್ಳುತ್ತಿತ್ತು.
- ಆರ್. ತಾರಾನಾಥ್