ಬೀರೂರು ಬೆಳಗಲಿ ಜರೂರು
ಬೀರೂರು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 206 ಮಾರ್ಗದಲ್ಲಿರುವ ಬೀರೂರು ಪಟ್ಟಣ ವಾಣಿಜ್ಯ ಕೇಂದ್ರ.
ಇಲ್ಲಿ ಅಡಕೆ ಪ್ರಮುಖ ವಹಿವಾಟು. ಇದು, ರೇಲ್ವೆ ಜಂಕ್ಷನ್ ಹೊಂದಿರುವುದರಿಂದ ಹೊರ ಊರುಗಳಿಂದ ಪ್ರತಿದಿನ ಬಹಳಷ್ಟು ಮಂದಿ ಬಂದು ಹೋಗುತ್ತಾರೆ.
ಇಲ್ಲಿ ಪ್ರಮುಖವಾಗಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ, ಇನ್ನು ಇಡೀ ವರ್ಷ ಕಾಡುವ ಸಮಸ್ಯೆವೆಂದರೆ ಕಸ. ಇದರ ವಿಲೇವಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಇದನ್ನು ಸರಿದಾರಿಗೆ ತರುವುದು ಪುರಸಭೆಯ ಕೆಲಸ. ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಸಹಕಾರ ಸಿಗುತ್ತಿಲ್ಲ.
ಬೀರೂರು ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಯಲ್ಲಿದೆ. ಆದರೂ ಸಹ ಕೆಲವು ಅಂಗಡಿಗಳು ರಾಜಾರೋಷವಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿವೆ. ಸಾರ್ವಜನಿಕರು ಸಹ ಇದರ ಬಳಕೆಯಿಂದ ಹಿಂದಕ್ಕೆ ಸರಿದಿಲ್ಲ. ಆದುದರಿಂದ ಬಳಕೆ ನಿರಂತರವಾಗಿ ನಡೆಯುತ್ತಿದೆ. ಹೀಗೆ ಬಳಸಿ ರಸ್ತೆಯಲ್ಲಿ ಬೀಸಾಡಿದ ಪ್ಲಾಸ್ಟಿಕ್ ಚರಂಡಿಯಲ್ಲಿ ಸಂಗ್ರಹವಾಗಿ ಚರಂಡಿಯಲ್ಲಿನ ನೀರು ಸರಾಗವಾಗಿ ಹರಿಯದೇ ದುರ್ವಾಸನೆ ಬೀರುತ್ತಿದೆ.
ಕಸ ಸಂಗ್ರಹ: ಪುರಸಭೆ ವ್ಯಾಪ್ತಿಯಲ್ಲಿ ದಿನಕ್ಕೆ 6-7 ಟ್ರ್ಯಾಕ್ಟರ್ನಷ್ಟು ಕಸ ಪ್ರತಿದಿನ ಸಂಗ್ರಹವಾಗುತ್ತಿದೆ.
ಪುರಸಭೆಯಲ್ಲಿ ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ ಕಸ ಸಂಗ್ರಹವನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಮಾಡಲಾಗುತ್ತಿದೆ. 23 ವಾರ್ಡ್ಗಳ ಪೈಕಿ 10 ವಾರ್ಡ್ಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ. ಅದಕ್ಕಾಗಿ ಪುರಸಭೆ ಖಾತೆಯಿಂದ ಪ್ರತಿ ತಿಂಗಳು ರು. 1.15 ಲಕ್ಷ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಇನ್ನುಳಿದ 13 ವಾರ್ಡ್ಗಳ ಕಸವನ್ನು ಪುರಸಭೆಯ ಕಾರ್ಮಿಕರೇ ಸಂಗ್ರಹ ಮಾಡುತ್ತಿದ್ದಾರೆ. ಕಸ ಸಂಗ್ರಹಣೆಗಾಗಿ ಪ್ರತಿ ಮನೆಗಳಿಂದ ತಿಂಗಳಿಗೆ ರು. 20 ಸಂಗ್ರಹ ಮಾಡಲಾಗುತ್ತಿದೆ.
ಸಂಗ್ರಹಿಸಿ ಕಸವನ್ನು ಹೊಸಳಮ್ಮ ಬಡಾವಣೆ ಹಾಗೂ ಯಗಟಿ ರಸ್ತೆಯಲ್ಲಿ ನಿಗದಿತ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆಂಬುದು ಸರ್ಕಾರದ ಆದೇಶ ಇದೆ.
ಆದರೆ, ಪುರಸಭೆ ಮಾತ್ರ ಈ ರೀತಿಯ ಕ್ರಮಕ್ಕೆ ಮುಂದಾಗಿಲ್ಲ. ಸಂಗ್ರಹಿಸಿದ ಕಸವನ್ನು ಗುಂಡಿಯಲ್ಲಿ ಹಾಕಿ ಅದರ ಮೇಲೆ ಮಣ್ಣು ಎಳೆದು ಸುಮ್ಮನಾಗುತ್ತಿದೆ. ಕಸ ಹಾಕಿದ ಮೇಲೆ ಗುಂಡಿ ತುಂಬುತ್ತದೆ ಹಾಗಾದರೆ ಮುಂದೇನೂ.
ಈ ಪ್ರಶ್ನೆಯ ಬಹು ದೂರದಲ್ಲ, ಇನ್ನು ಕೆಲವೇ ದಿನಗಳಲ್ಲಿ ಇದಕ್ಕೆ ಪುರಸಭೆಯವರು ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.
5 ಎಕರೆ ಜಾಗ ಗುರುತು: ಕಸ ವಿಲೇವಾರಿಗೆ ಬಿ.ಕೆ. ಹೊಸೂರು ಗ್ರಾಮದ ಬಳಿ 5 ಎಕರೆ ಜಾಗ ಗುರುತು ಮಾಡಲಾಗಿದೆ. ಆದರೆ, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಲಿ ಇರುವ ಗುಂಡಿಗಳು ತುಂಬುವುದರೊಳಗೆ ಮುಂದಿನ ದಿನಗಳಲ್ಲಿ ಕಸ ಎಲ್ಲಿ ವಿಲೇವಾರಿ ಮಾಡಬೇಕೆಂಬ ಸಮಸ್ಯೆಗೆ ಈಗಲೇ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.
ಸುಮಾರು 23 ಸಾವಿರ ಜನಸಂಖ್ಯೆ ಹೊಂದಿರುವ ಬೀರೂರು ಪಟ್ಟಣದ ಸ್ಥಳೀಯ ಸಂಸ್ಥೆ ಪೌರ ಕಾರ್ಮಿಕರ ಕೊರತೆ ಎದುರಿಸುತ್ತಿದೆ.
ಇಲ್ಲಿ ಕೇವಲ 13 ಮಂದಿ ಮಾತ್ರ ಪೌರ ಕಾರ್ಮಿಕರಿದ್ದು, ಅವರಿಂದ ಇಡೀ ಪಟ್ಟಣದ ಸ್ವಚ್ಚತೆ ನಿರ್ವಹಣೆಗೆ ಕಷ್ಟವಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿಗಳ ಮೇಲೆ ಕಣ್ಣಿಡಲು ಪುರಸಭೆಗೆ ಆಗುತ್ತಿಲ್ಲ.
ಜನರ ಅಸಹಕಾರ, ಪುರಸಭೆಯ ಅವೈಜ್ಞಾನಿಕ ಕಸ ವಿಲೇವಾರಿಯಿಂದಾಗಿ ಪ್ರಮುಖ ರಸ್ತೆಗಳಷ್ಟೇ ಅಲ್ಲ ಹಲವೆಡೆ ಮೂಗಿ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.
ಈ ಪರಿಸ್ಥಿತಿ ಸರಿಯಾಗಬೇಕಾದರೆ ಜನರು ಪ್ಲಾಸ್ಟಿಕ್ ಬಳಕೆಗೆ ಪೂಣ ಪ್ರಮಾಣದಲ್ಲಿ ಗುಡ್ ಬೈ ಹೇಳಬೇಕು. ಪುರಸಭೆಯವೂ ವಿಲೇವಾರಿಗೆ ವೈಜ್ಞಾನಿಕ ಕ್ರಮವನ್ನು ಅನುಸರಿಸಬೇಕು.
- ಕೆ.ಎಸ್. ಪ್ರಸನ್ನಕುಮಾರ್