ಮನೆ ಸುತ್ತ ನಿರ್ಮಲ ಪರಿಸರ ನಿರ್ಮಿಸಿ: ಗ್ರಾಪಂ ಅಧ್ಯಕ್ಷ
ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಮಾಗುಂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಮಾಗುಂಡಿ ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಹಾಗೂ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಮಾಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಮಾತನಾಡಿ, ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸಂಗ್ರಹವಾಗುವ ಘನತ್ಯಾಜ್ಯ ವಸ್ತುಗಳಲ್ಲಿ ನೀರು ಶೇಖರಣೆ ಆಗದಂತೆ ನೋಡಿಕೊಂಡು ಸೊಳ್ಳೆಗಳ ತಾಣಗಳನ್ನು ನಾಶ ಮಾಡಿದಾಗ ಮಲೇರಿಯಾ ರೋಗ ನಿಯಂತ್ರಿಸಲು ಸಾಧ್ಯ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಘು ಮಾತನಾಡಿ, ಆರೋಗ್ಯ ಇಲಾಖೆಯು ಈ ಹಿಂದೆ ಸೊಳ್ಳೆಗಳ ನಿಯಂತ್ರಣಕ್ಕೆ ಡಿಡಿಟಿ ಸಿಂಪಡಣೆ ಮಾಡುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕಾರ್ಯ ಸ್ಥಗಿತಗೊಂಡಿರುವುದರಿಂದ, ಪುನ- ಡಿಡಿಟಿ ಸಿಂಪಡಣೆ ಪ್ರಾರಂಭಿಸಬೇಕು ಎಂದುಹೇಳಿದರು.
ಆರೋಗ್ಯ ನಿರೀಕ್ಷಕ ಭಗವಾನ್ ಮಾತನಾಡಿ, ಮಲೇರಿಯಾ ರೋಗವು ಸಾಂಕ್ರಾಮಿಕ ವಾಗಿದ್ದು, ಸೋಂಕಿರುವ ವ್ಯಕ್ತಿ, ಅನಾಫಿಲಿಸ್ ಹೆಣ್ಣು ಸೊಳ್ಳೆ ಇದ್ದಲ್ಲಿ ರೋಗ ಹರಡುವುದು. ಮನೆಯ ಸುತ್ತಮುತ್ತಲಿನಲ್ಲಿ ಕಾಯಿ ಚಿಪ್ಪು, ಒಡೆದ ಬಕೆಟ್, ಮಡಿಕೆ, ಕುಡಿಕೆ ಹಾಗೂ ಬಾಟಲಿಗಳು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಅದರಲ್ಲಿ ನೀರು ಶೇಖರಣೆಯಾದ ನೀರಿನಲ್ಲಿ ಲಾರ್ವಾ, ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಹಿನ್ನೆಲೆಯಲ್ಲಿ ಇವನ್ನು ನಾಶಪಡಿಸಬೇಕು ಎಂದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಆರ್.ಪಿ. ಚೇತನಾ ಉಪಸ್ಥಿತರಿದ್ದರು.