ಸ್ವಚ್ಛತೆಗೆ ಆದ್ಯತೆ: ಲೇಖಾ ವಸಂತ್
ನರಸಿಂಹರಾಜಪುರ: ಕಸ ಮುಕ್ತ ಪಟ್ಟಣವನ್ನಾಗಿ ಮಾಡಲು ಪಟ್ಟಣ ಪಂಚಾಯ್ತಿ ಶ್ರಮಿಸುತ್ತಿದ್ದು, ಪಟ್ಟಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಲೇಖಾ ವಸಂತ್ ತಿಳಿಸಿದ್ದಾರೆ.
ಪಟ್ಟಣದಲ್ಲಿರುವ ಖಾಸಗಿಯವರ ಖಾಲಿ ನಿವೇಶನಗಳಿಗೆ ಬೇಲಿ ಹಾಕಿಕೊಂಡು ಸ್ವಚ್ಛಗೊಳಿಸುವಂತೆ ಮನವಿ ಮಾಡಲಾಗಿದ್ದು, ಈಗಾಗಲೇ ಹಲವು ನಿವೇಶನದಾರರು ಸ್ವಚ್ಛಗೊಳಿಸಿದ್ದಾರೆ. ಉಳಿದವರು ನಿವೇಶನ ಸ್ವಚ್ಛಗೊಳಿಸದಿದ್ದರೆ ಪಟ್ಟಣ ಪಂಚಾಯ್ತಿಯಿಂದಲೇ ಸ್ವಚ್ಛಗೊಳಿಸಿ ನಿವೇಶನ ಮಾಲೀಕರಿಗೆ ರು. 150 ದಂಡ ವಿಧಿಸಲು ತೀರ್ಮಾನಿಸಲಾಗಿದೆ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.
15 ಪೌರ ಕಾರ್ಮಿಕರ ತಂಡವು ಪಟ್ಟಣದ ಎಲ್ಲಾ ಬೀದಿಗಳನ್ನು ಸ್ವಚ್ಛಗೊಳಿಸುತ್ತಿದೆ. ಕಸ ಸಾಗಿಸಲು ಎರಡು ಟ್ರಾಕ್ಟರ್ ಇದ್ದು ಒಂದು ಟ್ರಾಕ್ಟರ್ ಮನೆ, ಮನೆ ಕಸ ಸಂಗ್ರಹ ಮಾಡುತ್ತಿದೆ. ಮತ್ತೊಂದು ಟ್ರಾಕ್ಟರ್ ಪಟ್ಟಣದ ಮುಖ್ಯ ಬೀದಿ, ಮಾರುಕಟ್ಟೆ ಹಾಗೂ ಬಸ್ ನಿಲ್ದಾಣದ ಕಸ ತೆಗೆದುಕೊಂಡು ಹೋಗುತ್ತದೆ. ಕಸವನ್ನು ಕಾಂಪೊಸ್ಟ್ ಮಾಡಲು ಕಸ ವಿಂಗಡಣಾ ಯಂತ್ರ ಖರೀದಿಸುವ ಬಗ್ಗೆ ಈಗಾಗಲೇ ಪಟ್ಟಣ ಪಂಚಾಯ್ತಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ. ಪಟ್ಟಣದ ತೆರೆದ ಚರಂಡಿಗೆ ಇಂಟರ್ ಲಾಕ್ ಹಾಕಿ ಮುಚ್ಚಿದ ನಂತರ ಅಲ್ಲಲ್ಲಿ ಕಸ ಹಾಕುವ ತೊಟ್ಟಿಯನ್ನು ಇಡಲಾಗುವುದು ಎಂದು ಅವರು ವಿವರಿಸಿದರು.
ಪ್ಲಾಸ್ಟಿಕ್ ನಿಷೇಧ: ಪಟ್ಟಣದಲ್ಲಿ 40 ಮೈಕ್ರಾನ್ಗಿಂತ ಕಡಿಮೆ ದಪ್ಪ ಇರುವ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಸಾದ್ಯವಾದಷ್ಟು ಪೇಪರ್ ಹಾಗೂ ಬಟ್ಟೆ ಚೀಲಗಳನ್ನು ಸಾರ್ವಜನಿಕರು ಉಪಯೋಗಿಸಬೇಕು. ಪ್ರತಿ ದಿನ ಮನೆ ಮುಂದೆ ಕಸ ಸಂಗ್ರಹಿಸುವ ಟ್ರಾಕ್ಟರ್ ಬಂದಾಗ ಕಸವನ್ನು ಹಾಕಬೇಕು ಎಂದು ಅವರು ಮನವಿ ಮಾಡಿದರು.
ನೀರಿಗೂ ಆದ್ಯತೆ: ಪಟ್ಟಣದ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿದ್ದೇವೆ. ನಾಗರಿಕರ ದೂರಿಗೆ ತಕ್ಷಣ ಸ್ಪಂದಿಸಿ ಕೆಲಸ ಮಾಡಿದ್ದೇವೆ. ಪಟ್ಟಣಕ್ಕೆ ಹೊಂದಿಕೊಂಡೇ ಇರುವ ಇಂದಿರಾ ನಗರ, ನಾಗಲಾಪುರ, ಸಿರಿಗಳಲೆ, ಮೆಣಸೂರು ವ್ಯಾಪ್ತಿಯಲ್ಲಿ ಈ ಹಿಂದೆ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಪಟ್ಟಣ ಪಂಚಾಯ್ತಿಯಿಂದಲೇ ಕುಡಿಯುವ ನೀರು ನೀಡಿದ್ದೇವೆ ಎಂದು ಅವರು ವಿವರಿಸಿದರು.
ಪಟ್ಟಣ ಪಂಚಾಯ್ತಿಯನ್ನು ಪುರಸಭೆಯಾಗಿ ಪರಿವರ್ತಿಸಲು ಸರ್ಕಾರಕ್ಕೆ ಈ ಹಿಂದೆಯೇ ಪ್ರಸ್ತಾವ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.