ಸಾರ್ವಜನಿಕ ಶೌಚಾಲಯ ಅವ್ಯವಸ್ಥೆ
ನಿಮ್ಮ ಮೂಗು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ಇಲ್ಲವೋ ಎಂದು ನೀವು ಸುಲಭವಾಗಿ ತಿಳಿಯಬೇಕೇ? ಹಾಗಾದರೆ ಕಡೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ-206 ಗೆ ಹೊಂದಿಕೊಂಡಿರುವ ಕೆ.ಎಲ್.ವಿ. ವೃತ್ತಕ್ಕೆ ಬನ್ನಿ.
ವೃತ್ತದ ಬಳಿ ಇರುವ ಸಾರ್ವಜನಿಕ ಶೌಚಾಲಯಕ್ಕೆ ಮೂಗಿರುವವರಂತೂ ಈ ರಸ್ತೆಯಲ್ಲಿ ಓಡಾಡಲೂ ಸಾಧ್ಯವಿರದ ಮಾತು. ಏಕೆಂದರೆ ಅಷ್ಟೊಂದು ಗಬ್ಬುನಾರುತ್ತಿದೆ ಈ ಶೌಚಾಲಯ. ಶೌಚಾಲಯದ ಸುತ್ತ ಒಳಗಿನಿಂದ ಹೊರಬಂದು ಸುತ್ತ ಆವರಿಸಿರುವ ಮಲ-ಮೂತ್ರ ಸಂಗ್ರಣೆಗೆ ಪರ್ಯಾಯ ವ್ಯವಸ್ಥೆ ಏನೂ ಮಾಡಿಲ್ಲ. ಇಲ್ಲಿ ಏನೂ ಅವ್ಯವಸ್ಥೆ ಇಲ್ಲ, ಎಲ್ಲ ಸರಿಯಾಗಿದೆ ಎಂದು ಮಾಮೂಲಿಯಾಗಿ ತಮ್ಮ ಕಾರ್ಯದಲ್ಲಿ ಮಗ್ನರಾಗಿರುವ ಶೌಚಾಲಯದ ಸಿಬ್ಬಂದಿ ಹಾಗೂ ಕೆಟ್ಟ ಅವ್ಯವಸ್ಥೆ ಬಗ್ಗೆ ಸಂಬಂಧಿಸಿದ ಪುರಸಭೆ ಮಾತ್ರ ತಲೆಕೆಡಿಸಿಕೊಂಡಿಲ್ಲ.
ಇದರ ಮುಂದೆ ಪ್ರತಿ ದಿನ ಅಕ್ಕಪಕ್ಕದ ಜನ ಓಡಾಡಾತ್ತಲೇ ಇರುತ್ತಾರೆ. ಹೊಸದಾಗಿ ಓಡಾಡುವ ಜನ ಮೂಗು ಸರಿಯಾಗಿ ಕೆಲಸ ಮಾಡುತ್ತಿದ್ದರೆ ಮಾತ್ರ ಮೂಗು ಗಟ್ಟಿಯಾಗಿ ಬಿಗಿ ಹಿಡಿದು ಅವಸರದ ಹೆಜ್ಜೆ ಹಾಕುತ್ತಾ ಸಾಗುವ ದೃಶ್ಯ ಮಾತ್ರ ಸಾಮಾನ್ಯ. ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಈ ರಸ್ತೆಯಲ್ಲಿ ನ್ಯಾಯಾಲಯ, ತಾಲೂಕು ಕಚೇರಿ, ಜಿಲ್ಲಾ ಪಂಚಾಯ್ತಿ ಕಚೇರಿ, ಕನ್ನಡ ಭವನ, ಸಾರ್ವಜನಿಕ ಆಸ್ಪತ್ರೆ ಮುಂತಾದ ಪ್ರಮುಖ ಸರಕಾರಿ ಕಚೇರಿಗಳಿದ್ದರೂ ಇದಕ್ಕೆ ಸಂಬಂಧಪಟ್ಟವರು ಕಂಡೂ ಕಾಣದಂತಿರುವುದು ಪಟ್ಟಣದ ಜನತೆಯ ಸೋಜಿಗಕ್ಕೆ ಕಾರಣವಾಗಿದೆ.
ಎಂ.ಜಿ. ರಸ್ತೆ ಅಭಿವೃದ್ಧಿಪಡಿಸಿ
ತರೀಕೆರೆ: ಪಟ್ಟಣದ ಸಣ್ಣ ಪುಟ್ಟ ರಸ್ತೆಗಳೆಲ್ಲಾ ಡಾಂಬರೀಕರಣ ಮತ್ತು ಕಾಂಕ್ರೀಟೀಕರಣ ಆಗುತ್ತಿರುವುದು ಸಂತೋಷಕರವಾದ ವಿಷಯ. ಆದರೆ, ಪಟ್ಟಣದ ಪ್ರಮುಖ ಬೀದಿಯಾಗಿರುವ ಮಹಾತ್ಮ ಗಾಂಧಿ ರಸ್ತೆ ದುರಸ್ತಿಗೆ ಬಾರದಷ್ಟು ಹಾಳಾಗಿದೆ. ಆಳುದ್ದ ಗುಂಡಿಗಳು ಸೃಷ್ಟಿಯಾಗಿವೆ. ರಸ್ತೆ ಮೇಲಿನ ಡಾಂಬರ್ ಕಿತ್ತು ಹೋಗಿ, ಕಲ್ಲು ಮತ್ತು ಜೆಲ್ಲಿ ಚೂರು ಗುಂಡಿಗಳಿಂದ ಹೊರಬಂದಿದೆ. ವಾಹನಗಳು, ಟ್ರ್ಯಾಕ್ಟರ್, ಮೋಟಾರ್ ಬೈಕ್, ರಸ್ತೆಯಲ್ಲಿ ಸಂಚರಿಸಿದಾಗ ವಾಹನಗಳ ಚಕ್ರಗಳಿಗೆ ಸಿಲುಕಿ ರಸ್ತೆಯ ಮಗ್ಗುಲಿನಲ್ಲಿ ಕಷ್ಟಪಟ್ಟು ಕಾಲ್ನಡಿಗೆಯಲ್ಲಿ ಸಂಚರಿಸುತ್ತಿರುವ ಪಾದಚಾರಿಗಳ ಮುಖಕ್ಕೆ ಮತ್ತು ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ಹಾರಿ ಅನಾಹುತ ಸಂಭವಿಸುತ್ತಿದೆ.
ಎಂ.ಜಿ. ರಸ್ತೆ ಪಟ್ಟಣದ ಪ್ರಮುಖ ರಸ್ತೆ ಮತ್ತು ವಾಣಿಜ್ಯ ಕೇಂದ್ರ ಹಾಗೂ ಜನವಸತಿಯಿಂದ ಕೂಡಿರುವ ಪ್ರದೇಶವಾಗಿದೆ. ಪರಿಣಾಮ ವಿವಿಧ ರೀತಿಯ ವಾಹನ ಮತ್ತು ಜನ ಸಂಚಾರಗಳಿಂದ ಶಾಲಾ -ಕಾಲೇಜು ವಿದ್ಯಾರ್ಥಿಗಳಿಂದ ದಿನದ ಪೂರ್ಣ ಸಮಯ ಜನದಟ್ಟಣೆಯಿಂದ ಕೂಡಿರುತ್ತದೆ. ಇಷ್ಚೇ ಅಲ್ಲದೆ, ಎಂ.ಜಿ. ರಸ್ತೆಯಲ್ಲಿ ನೂತನವಾದ ಸರ್ಕಾರಿ ಆಯುರ್ವೇದ ಆಸ್ಪತ್ರೆ ಪ್ರಾರಂಭ ಆಗಿರುವುದರಿಂದ ಪಟ್ಟಣದ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶದ ಜನರು ಈ ಆಸ್ಪತ್ರೆಗೆ ಬರಬೇಕಾಗಿರುತ್ತದೆ.
ಕಾರಣ ರಸ್ತೆ ಅಭಿವೃದ್ಧಿ ಅತ್ಯಗತ್ಯವಾಗಿದೆ. ರಸ್ತೆ ಹಾಳಾಗಿ ವರ್ಷಗಳೇ ಉರುಳಿದವು. ಆದುದರಿಂದ ಸ್ಥಳೀಯ ಪುರಸಭೆ ಕೂಡಲೇ ಗಮನಹರಿಸಿ ರಸ್ತೆ ಅಭಿವೃದ್ಧಿ ಕಡೆಗೆ ಗಮನಕೊಡಲಿ.
ಟಿ ನಾಗರಾಜ್, ತರೀಕೆರೆ
ರಸ್ತೆ ಡಾಂಬರೀಕರಣಗೊಳಿಸಿ
ಶೃಂಗೇರಿಯ ಮುಖ್ಯದ್ವಾರದ ಬಳಿ ಕಳೆದೊಂದು ವರ್ಷದಿಂದ ಮುಖ್ಯ ರಸ್ತೆಯಲ್ಲಿ ಹೊಂಡ ಕಾಣಿಸಿಕೊಂಡಿದ್ದು, ಹೆದ್ದಾರಿ ಇಲಾಖೆ ಒಂದು ವರ್ಷ ಕಳೆದರೂ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ರಸ್ತೆ ಇಕ್ಕಟ್ಟಿನ ನಡುವೆ ಎರಡೆರೆಡು ಪೊಲೀಸ್ ಬ್ಯಾರಿಗೇಡ್ ಇಡಲಾಗಿದೆ. ಶಿವಮೊಗ್ಗ, ಮಂಗಳೂರು, ಉಡುಪಿ, ಚಿಕ್ಕಮಗಳೂರು ಸಂಪರ್ಕ ಕಲ್ಪಿಸುವ ಕೇಂದ್ರ ರಸ್ತೆ ಇದಾಗಿದ್ದು, ಇಲ್ಲಿ ಸಂಚರಿಸುವ ವಾಹನಗಳು ಸೇರಿದಂತೆ ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ.
ಕಳೆದ ವರ್ಷದ ಮಳೆಗಾಲದಲ್ಲಿ ಇಲ್ಲಿ ರಸ್ತೆ ಕುಸಿದು ಹೊಂಡ ಬಿದ್ದಿದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಯಾವುದೇ
ಕ್ರಮ ಕೈಗೊಂಡಿಲ್ಲ. ಇನ್ನಾದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸಿ ಕೂಡಲೇ ಕ್ರಮ ಕೈಗೊಂಡು ರಸ್ತೆ ಡಾಂಬರೀಕರಣಗೊಳಿಸಿ ಸಮಸ್ಯೆ ಬಗೆಹರಿಸಬೇಕಿದೆ.
ಟಿ ಅವಿನಾಶ್, ಶೃಂಗೇರಿ