ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಹಳ್ಳಿಗಳು ಸಾಂಸ್ಕೃತಿಕ ಪ್ರಜ್ಞಾವಂತಿಕೆ ಕೇಂದ್ರಗಳಾಗಲಿ'

Rashmi Kasaragodu
Updated On : 3 Mar 2014, 11:29 am

ಚಿಕ್ಕಮಗಳೂರು: ಗಾಂಧಿ ಗ್ರಾಮದ ಜೀವಂತಿಕೆ ಇಂದಿನ ಅಗತ್ಯವಾಗಿದೆ. ಹಳ್ಳಿಗಳು ಸಾಂಸ್ಕೃತಿಕ ಪ್ರಜ್ಞಾವಂತಿಕೆ ರಾಜಕಾರಣದ ಕೇಂದ್ರಗಳಾಗಿ ರೂಪುಗೊಳ್ಳಬೇಕೆಂದು ಕುವೆಂಪು ವಿಶ್ವವಿದ್ಯಾನಿಲಯದ ರಿಜಿಸ್ಟಾರ್ ಡಾ. ಮಲ್ಲಿಕಾ ಘಂಟಿ ಹೇಳಿದ್ದಾರೆ.
ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಕ್ಯಾತನಬೀಡು ಪ್ರತಿಷ್ಠಾನ ಆಯೋಜಿಸಿದ್ದ ಸಾಹಿತ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಯುವಕರು ನಗರದ ಸೆಳೆತದಿಂದ ಆರೋಗ್ಯಕರ ಬದುಕು ಇಲ್ಲವಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಸ್ಥಿತಿ- ಗತಿ ಉಲೇಖಿಸಿದ ಅವರು, ಕೆಟ್ಟ ರಾಜಕಾರಣವು ಹಳ್ಳಿಗಳ ಸಾಮಾಜಿಕ- ಸಾಂಸ್ಕೃತಿಕ ವಾತಾವರಣವನ್ನೇ ಹಾಳುಗೆಡುವುತ್ತಿದೆ. ನೆಮ್ಮದಿ- ಸೌಖ್ಯದ ಬದುಕು ಮರೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾವ್ಯ ತಾತ್ಪರ್ಯ: ಎಲ್ಲೋ ಹುಡುಕಿದೆ ಇಲ್ಲದ ದೇವರು, ಕಲ್ಲು ಮಣ್ಣುಗಳ ಗುಡಿಯೊಳಗೆ ಎಂಬ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಕಾವ್ಯ ತಾತ್ಪರ್ಯ ಪ್ರಸ್ತಾಪಿಸಿದ ಅವರು, ದೇವರು ಗುಡಿ- ಗೋಪುರಗಳಲ್ಲಿಲ್ಲದೆ ನಮ್ಮ ಹೃದಯ ನಮ್ಮ ಕೈಗಳಲ್ಲಿಯೇ ಇದ್ದಾನೆ. ನಮ್ಮ ಮನಸ್ಸಿನೊಳಗಿರುವ ದೇವರು ಮೊದಲು ಸಾಕಾರಗೊಳ್ಳಬೇಕು. ಹಸಿದವನಿಗೆ ಅನ್ನ, ನೀರು ನೀಡಿದರೆ ದೇವರನ್ನು ಕಾಣಬಹುದು. ಹಂಚಿಕೊಂಡು ತಿನ್ನುವಾಗ ದೇವರು ಪ್ರತ್ಯಕ್ಷನಾಗುತ್ತಾನೆ. ಮುಚ್ಚಿಕೊಂಡು ತಿನ್ನುವಾಗ ದೇವರೆ ಇಲ್ಲವಾಗುತ್ತಾನೆಂದು ದೇವರ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಯನ್ನು ಮಾರ್ಮಿಕವಾಗಿ ಪ್ರಸ್ತಾಪಿಸಿ, ಸಾಮಾಜಿಕ ವ್ಯವಸ್ಥೆಯ ಸುಧಾರಣೆ ಬಯಸಿದರು.
ಜಿ.ಎಸ್. ಶಿವರುದ್ರಪ್ಪನವರ ಆಶಯಗಳು ಎಂಬ ವಿಷಯದ ಕುರಿತು ಮಾತನಾಡಿದ ಕವಿ ಅಗ್ರಹಾರ ಕೃಷ್ಣಮೂರ್ತಿ, ಹಳ್ಳಿಗಳನ್ನು ಮರೆಯಾದ ಗ್ರಾಮೀಣ ಪ್ರದೇಶ ಜನರನ್ನು ಪ್ರೋತ್ಸಾಹಿಸಿದ ಕವಿ ಜಿ.ಎಸ್. ಶಿವರುದ್ರಪ್ಪನವರು. ನಾಡನ್ನು ಕಟ್ಟುವ, ಭಾಷೆ ಕಟ್ಟುವ ವೈಯಕ್ತಿಕ ನೆಲೆಯಲ್ಲಿ ಮೌಲ್ಯ ವೃದ್ಧಿಸುವ ಆಶಯ ಹೊಂದಿದ್ದರು ಎಂದು ಹೇಳಿದರು.
ದಿವ್ಯೌಷಧಿ: ಅಧ್ಯಕ್ಷತೆ ವಹಿಸಿದ್ದ ಅಂಕಣಕಾರ ಬಿ. ಚಂದ್ರೇಗೌಡ ಮಾತನಾಡಿ, ಮಾನವೀಯ ಮೌಲ್ಯಗಳು ಅಧಃಪತನದತ್ತ ಸಾಗುತ್ತಿರುವ ಇಂದಿನ ಸಾಮಾಜಿಕ ಸಂದರ್ಭದಲ್ಲಿ ನಗರಗಳು ರೋಗಕ್ಕೆ ತುತ್ತಾಗುತ್ತಿವೆ. ಹಳ್ಳಿಗಳು ಕ್ಷಯ ಪೀಡಿತವಾಗುತ್ತಿವೆ. ಈ ಜೀವವಿರೋಧಿ ಜಾಡ್ಯ ನಿವಾರಿಸಲು ಸೌಹಾರ್ದತೆ ಬೆಸೆಯುವ ಸಾಹಿತ್ಯ ಮಾತ್ರವೇ ದಿವ್ಯೌಷಧಿ ಎಂದರು.
ಪ್ರಗತಿಪರ ಚಿಂತಕ ಬಿ. ಅಮ್ಜದ್, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಎಂ. ರುದ್ರಸ್ವಾಮಿ ಮಾತನಾಡಿದರು. ಕ್ಯಾತನಬೀಡು ಪ್ರತಿಷ್ಠಾನ ಗೌರವ ಕಾರ್ಯದರ್ಶಿ ರವೀಶ್ ಕ್ಯಾತನಬೀಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಜುನಾಥ್ ಸ್ವಾಗತಿಸಿ, ಕೆ.ಎಸ್. ಸದಾಶಿವ ವಂದಿಸಿದರು.
ಕೆ.ಪಿ. ಬಸವರಾಜ್ ನಿರೂಪಿಸಿದರು. ಆರಂಭದಲ್ಲಿ ಆಕಾಶವಾಣಿ ಕಲಾವಿದ ಪಂಡಿತ ವೇಣುಗೋಪಾಲ್ ತಂಡದಿಂದ ಗೀತಗಾಯನ- ಕವಿ ಕಾವ್ಯ ನಮನ ಕಾರ್ಯಕ್ರಮ ನಡೆಯಿತು. ಸಾಸ್ವೇಹಳ್ಳಿ ಸತೀಶ್ ನಿರ್ದೇಶನದ ಕರ್ಣಾಂತರಂಗ ನಾಟಕ ಪ್ರದರ್ಶನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement