ಆಯುರ್ವೇದ ಆಸ್ಪತ್ರೆಗೆ ಶಾಸಕರ ದಿಢೀರ್ ಭೇಟಿ
ತರೀಕೆರೆ: ಪಟ್ಟಣದಲ್ಲಿ ಇತ್ತೀಚೆಗೆ ನೂತನ ಕಟ್ಟಡದಲ್ಲಿ ಉದ್ಘಾಟನೆಗೊಂಡ ಆಯುಷ್ ಇಲಾಖೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಸೋಮವಾರ ಶಾಸಕ ಜಿ.ಎಚ್. ಶ್ರೀನಿವಾಸ್, ಪುರಸಭಾ ಸದಸ್ಯರಾದ ಈರಣ್ಣ, ನಾಗರಾಜ್, ಸುನೀಲ್ ದತ್ತ ಅವರು ದಿಢೀರ್ ಭೇಟಿ ನೀಡಿ ಆಸ್ಪತ್ರೆ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಆಸ್ಪತ್ರೆ ಸಿಬ್ಬಂದಿಯ ಹಾಜರಿ ಪುಸ್ತಕ, ಹೊರರೋಗಿಗಳ ದಾಖಲಾತಿಗಳನ್ನು ಕೂಲಂಕಶವಾಗಿ ಪರಿಶೀಲಿಸಿ, ರೋಗಿಗಳ ಪ್ತತಿಯೊಂದು ಕೊಠಡಿಗಳ ನೈರ್ಮಲ್ಯತೆ, ಗಾಳಿ ಬೆಳಕು, ಆಸ್ಪತ್ರೆಯ ಔಷಧಾಲಯ, ಪ್ರಯೋಗಾಲಯ, ಔಷಧಗಳ ಸಂಗ್ರಹಣಾ ಕೊಠಡಿಗೆ ಭೇಟಿ ವಿವಿಧ ಬಗೆಯ ತೈಲ, ಕಷಾಯ ಇತ್ಯಾದಿಗಳ ಔಷಧಿಗಳನ್ನು ಪರಿಶೀಲಿಸಿದರು.
ಶ್ಲಾಘನೆ: ಆಯುರ್ವೇದ ಆಸ್ಪತ್ರೆಯಲ್ಲಿ ಗುಣಮಟ್ಟದ ಆಯುರ್ವೇದದ ವಿವಿಧ ಬಗೆಯ ಮಾತ್ರೆಗಳು, ಕಷಾಯ, ತೈಲ ಇತ್ಯಾದಿಗಳು ಸರಬರಾಜಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು. ಆಸ್ಪತ್ರೆ ಸೌಲಭ್ಯಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಆಸ್ಪತ್ರೆಗೆ ಅಗತ್ಯವಿರುವ ಸಿಬ್ಬಂದಿ ನೇಮಕಕ್ಕೆ ತಾವು ಸರ್ಕಾರದಲ್ಲಿ ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ಆಸ್ಪತ್ರೆ ತಜ್ಞ ವೈದ್ಯ ಡಾ.ಕಿಶೋರ್ಕುಮಾರ್ ಶಾಸಕರನ್ನು ಸ್ವಾಗತಿಸಿದರು. ಬಸಪ್ಪ, ನೇತ್ರಾವತಿ ಮತ್ತಿತರರು ಭಾಗವಹಿಸಿದ್ದರು.