ಕಣ್ಣಿನ ಬಗ್ಗೆ ಕಾಳಜಿ ವಹಿಸಿನೇತ್ರ ತಪಾಸಣಾ ಶಿಬಿರದಲ್ಲಿ ಡಾ.ಅಣ್ಣಾದೊರೆ
ಕ.ಪ್ರ.ವಾರ್ತೆ, ಶೃಂಗೇರಿ, ಮಾ.3
ಪಂಚೇಂದ್ರಿಯಗಳಲ್ಲಿ ಪ್ರಮುಖವಾಗಿರುವ ಕಣ್ಣುಗಳು ಮನುಷ್ಯ ದೇಹದ ಶ್ರೇಷ್ಠ ಅಂಗವಾಗಿದೆ. ಕಣ್ಣುಗಳ ರಕ್ಷಣೆ ಬಗ್ಗೆ ಪ್ರತಿಯೊಬ್ಬರು ವಿಶೇಷ ಕಾಳಜಿ ವಹಿಸಿಬೇಕು ಎಂದು ಡಾ.ಅಣ್ಣಾದೊರೆ ಸಲಹೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಉಡುಪಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ), ಲಯನ್ಸ್ ಕ್ಲಬ್, ಸಾರ್ವಜನಿಕ ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಅವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಣ್ಮ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಣ್ಣಿನ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿದೆ. ಆದ್ದರಿಂದ ಕಣ್ಣುಗಳ ತೊಂದರೆ ಬಗ್ಗೆ ನಿರ್ಲಕ್ಷ ಬೇಡ. ಪ್ರತಿಯೊಬ್ಬರು ದೃಷ್ಟಿದೋಷದಿಂದ ನಿತ್ಯ ಕೆಲಸಗಳಿಂದ ವಂಚಿತರಾಗಬಾರದು. ಆಗಾಗ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ಕಣ್ಣಿನ ತೊಂದರೆ ಉಂಟಾದಾದ ನಿರ್ಲಕ್ಷ ವಹಿಸಿದರೆ ದೃಷ್ಟಿಹೀನತೆ ಎದುರಿಸಬೇಕಾಗುತ್ತದೆ ಎಂದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ಡಾ.ನಿತ್ಯಾನಂದ ನಾಯಕ್ ಜನಸಾಮಾನ್ಯರು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಂಡರೆ ಶಿಬಿರಗಳು ಯಶಸ್ವಿಯಾಗಲು ಸಾಧ್ಯ. ಕಣ್ಣುಗಳ ತೊಂದರೆ ಕಾಣಸಿಕೊಂಡಾಗ ವೈದ್ಯರ ಸಲಹೆ, ಚಿಕಿತ್ಸೆ ಪಡೆದು ಕಣ್ಣುಗಳನ್ನು ರಕ್ಷಿಸಿಕೊಳ್ಳಬೇಕು. ಅಂಧತ್ವ ನಿವಾರಣೆ ಮಾಡುವುದು ಇಂತಹ ಶಿಬಿರಗಳ ಮುಖ್ಯ ಉದ್ದೇಶ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್, ಡಾ.ಶಬಿರ್, ತಾಲೂಕು ವರ್ತಕರ ಸಂಘದ ಅಧ್ಯಕ್ಷ ಡಿ.ಸಿ. ಶಂಕರಪ್ಪ, ರಾಜಶೇಖರ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.