ಕೆಮ್ಮಣಗುಂಡಿ, ಕಲ್ಲತ್ತಿಗಿರಿ ಪ್ರವಾಸಿ ತಾಣ: ಕ್ರಮ
ತರೀಕೆರೆ: ತಾಲೂಕಿನ ಕೆಮ್ಮಣಗುಂಡಿ ಕಲ್ಲತ್ತಿಗಿರಿ ಗಿರಿಪ್ರದೇಶಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದ್ದಾರೆ. ಸಮೀಪದ ಲಿಂಗದಹಳ್ಳಿಯ ಸಹ್ಯಾದ್ರಿಪುರದಲ್ಲಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಎನ್‌ಆರ್‌ಡಬ್ಲುಎಸ್ ಯೋಜನೆಯಲ್ಲಿ 45 ಲಕ್ಷ ವೆಚ್ಚದ ಮೇಲ್ತೊಟ್ಟಿ, ನೆಲತೊಟ್ಟಿ ಮತ್ತು ಪಪೂ ಕಾಲೇಜಿಗೆ 16.50 ಲಕ್ಷ ವೆಚ್ಚದ ಮೂರು ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಲಿಂಗದಹಳ್ಳಿ ಹೋಬಳಿ ಕೇಂದ್ರವಾಗಿದೆ. ದಕ್ಷಿಣದ ಊಟಿ ಎಂದೇ ಪ್ರಸಿದ್ಧಿಯಾಗಿರುವ ಕೆಮ್ಮಣಗುಂಡಿ ಮತ್ತು ಐತಿಹಾಸಿಕ ಹಿನ್ನಲೆಯುಳ್ಳ ಕಲ್ಲತ್ತಿಗಿರಿ ಜಲಪಾತ ಪ್ರವಾಸಿ ತಾಣಗಳಾಗಿದೆ. ಇವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ನೀರಿನ ಪ್ರಮಾಣ ಕುಗ್ಗಿದೆ: ಮಲೆನಾಡು ಸೆರಗಿನಲ್ಲಿದ್ದರೂ ಈ ಬಾರಿ ಪ್ರಕೃತಿ ಕೈಕೊಟ್ಟ ಕಾರಣ ಹೋಬಳಿಯಲ್ಲಿ ಕುಡಿಯುವ ನೀರಿನ ಮತ್ತು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಗ್ಗಿದೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮಾಡಲು ಹಲವಾರು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು. ಜಿಪಂ ಸದಸ್ಯೆ ಹೇಮಾವತಿ ಕೃಷ್ಣಪ್ಪ, ಗ್ರಾಪಂ ಅಧ್ಯಕ್ಷೆ ಚಂದ್ರೀಬಾಯಿ ಸಕ್ರಾನಾಯ್ಕ, ಉಪಾಧ್ಯಕ್ಷ ಚಂದ್ರಶೇಖರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಂ, ಗ್ರಾಪಂ ಸದಸ್ಯ ಚಂದ್ರಪ್ಪ, ಗಂಗ್ಯಾನಾಯ್ಕ, ಎಸ್.ಎ. ಕೃಷ್ಣಪ್ಪ, ಗುಳ್ಳದಮನೆ ರಾಮಚಂದ್ರಪ್ಪ, ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.