'ಮಹಿಳೆ, ಮಕ್ಕಳ ಸಾಗಣೆ ತಡೆ ಎಲ್ಲರ ಕರ್ತವ್ಯ'
ಶೃಂಗೇರಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು, ಮಕ್ಕಳ ಅಕ್ರಮ ಸಾಗಣೆಯಂತಹ ಹೀನಕೃತ್ಯಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿಯಾಗಿದೆ. ಇದನ್ನು ತಡೆಗಟ್ಟುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಾವಿನಕಾಡು ರಂಗನಾಥ್ ತಿಳಿಸಿದರು.
ಪಟ್ಟಣದ ಗೌರಿಶಂಕರ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ತಾಲೂಕು ಆಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ, ಮಾರಾಟ ತಡೆಗಟ್ಟಲು ತಾಲೂಕುಮಟ್ಟದ ಜಾಥಾ, ಬೃಹತ್ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ಸ್ಥಳೀಯ ಮಟ್ಟದಿಂದಲೇ ತಡೆಗಟ್ಟಬೇಕು ಎಂದರು.
ಜನಜಾಗೃತಿ ಅನಿವಾರ್ಯ: ಮಾನವ ಸಾಗಣೆ ತಡೆಗಟ್ಟಿ ಸಾಗಣೆಗೆ ಒಳಪಟ್ಟ ಮಕ್ಕಳು, ಮಹಿಳೆಯರಿಗೆ ಪುನರ್‌ವಸತಿ ಕಲ್ಪಿಸಿಕೊಡಬೇಕು. ಅನಕ್ಷರತೆ, ಬಡತನ, ಅಜ್ಞಾನ, ಮೂಢನಂಬಿಕೆಗಳನ್ನು ಬಳಸಿಕೊಂಡು ಮಕ್ಕಳು, ಮಹಿಳೆಯರ ಸಾಗಣೆ ಮಾಡಿ ಬಲವಂತದ ದುಡಿಮೆ, ವೇಶ್ಯಾವಾಟಿಗೆ ತಳ್ಳಲಾಗುತ್ತಿದೆ. ಇಂತಹ ನೀಚಕೃತ್ಯ ತಡೆಗಟ್ಟಲು ಜನಜಾಗೃತಿ ಅನಿವಾರ್ಯ ಎಂದರು.
ತಾಪಂ ಉಪಾಧ್ಯಕ್ಷೆ ಪುಷ್ಪಲಕ್ಷ್ಮಿ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್, ತಾಪಂ ಸಾಮಾಜಿಕ ಸ್ಥಾಯಿ ಸಮೀತಿ ಅಧ್ಯಕ್ಷ ನೂತನ್ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯೆ ಗೀತಾ ಶ್ರೀನಿವಾಸ್ ನಾಯಕ್, ಉಮಾರಾಜ್ ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
ನ್ಯಾಯವಾದಿಗಳಾದ ರಾಜೇಶ್ವರಿ, ನಾರಾಯಣಸ್ವಾಮಿ, ಗುರುಮೂರ್ತಿ ವಿಶೇಷ ಉಪನ್ಯಾಸ ನೀಡಿದರು. ಬೆಳಗ್ಗೆ ಪಟ್ಟಣದ ಮುಖ್ಯದ್ವಾರದಿಂದ ಬೃಹತ್ ಜನಜಾಗೃತಿ ಆಂದೋಲನ ಜಾಥಾ ಹೊರಟು ಪಟ್ಟಣ ಪಂಚಾಯಿತಿ ಎದುರು ಸಮಾವೇಶಗೊಂಡಿತು.
ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಎಲ್. ಉಮೇಶ್ ಸ್ವಾಗತಿಸಿ, ಸಾವಿತ್ರಿ ನಿರೂಪಿಸಿ, ರೂಪಾ ಪಾಟೀಲ್ ವಂದಿಸಿದರು.