360ಕ್ಕೂ ಅಧಿಕ ಬೆಲೆ ಬಾಳುವ ಮರ ಕಡಿತಲೆ
ಮೂಡಿಗೆರೆ: ಕೆ.ತಲಗೂರು ಗ್ರಾಮದ ಸ.ನಂ.56ರಲ್ಲಿನ ಕಂದಾಯ ಭೂಮಿಯಲ್ಲಿ 360ಕ್ಕೂ ಅಧಿಕ ಬೆಲೆ ಬಾಳುವ ಮರಗಳ ಕಡಿತಲೆ ನಡೆದಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಅಮರನಾಥ್ ಆರೋಪಿಸಿದ್ದಾರೆ.
ಅವರು ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಂಬಂಧ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ 2014ರ ಫೆ.10ರಂದು ದೂರು ನೀಡಿದ್ದರಿಂದ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಅವರು ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಫೆ.28ರಂದು ಚಿಕ್ಕಮಗಳೂರು ಸಂಚಾರಿ ವಿಚಕ್ಷಣ ದಳದ ಮುಖ್ಯಸ್ಥ ಕೃಷ್ಣೇಗೌಡ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಸ್ಥಳ ಪರಿಶೀಲಿಸಿದಾಗ ಮತ್ತಷ್ಟು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಮರಗಳ್ಳತನ: ಸಾರಗೋಡು ಮೀಸಲು ಅರಣ್ಯ ಭಾಗಗಳಲ್ಲಿ ಬೆಲೆ ಬಾಳುವ ಸಾಗುವಾನಿ, ಹಲಸು, ಬೀಟೆ, ನಂದಿ ಮರಗಳ್ಳತನ ನಡೆಯುತ್ತಿದೆ. ಸ್ಥಳೀಯ ಅರಣ್ಯಾಧಿಕಾರಿಗಳೂ, ಅರಣ್ಯ ಕಾವಲುಗಾರರು ಕಳ್ಳರೊಂದಿಗೆ ಶಾಮಿಲಾಗಿ ಕಳ್ಳತನ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ಸಾಮಾನ್ಯ ಜನರು ದಟ್ಟಾರಣ್ಯ ಪ್ರವೇಶಿಸಿದಂತೆ ಅರಣ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸುತ್ತಾರೆ.
ಕೇವಲ 1 ಲಕ್ಷ ದಂಡ: ಮರಗಳ್ಳತನವು ಒಂದು ಅಂದಾಜಿನ ಪ್ರಕಾರ ಸುಮಾರು ರು. 7.20 ಕೋಟಿ ದಾಟುತ್ತದೆ. ಆದರೆ ಕಡಿದಿರುವ ಎಸ್ಟೇಟಿನ ಮಾಲಿಕರು ಕೇವಲ ರು. 1 ಲಕ್ಷದ ದಂಡ ವಿಧಿಸಿ ಅರಣ್ಯಾಧಿಕಾರಿಗಳು ತೇಪೆ ಸಾರಿಸಿದ್ದಾರೆ.
ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಎಸ್ಟೇಟು ಮಾಲಿಕರ ಸಹಿತ ಶಾಮಿಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.