ಬಸವ ವಸತಿ ಯೋಜನೆಯಡಿ 500 ಮನೆ ಮಂಜೂರು
ಕ.ಪ್ರ.ವಾರ್ತೆ ್ಣ ತರೀಕೆರೆ ್ಣ ಮಾ. 4
ಬಸವ ವಸತಿ ಯೋಜನೆಯಡಿ ತಾಲೂಕಿಗೆ 500 ಮನೆ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿದೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದರು.
ಅವರು, ಮಂಗಳವಾರ ಸಮೀಪದ ಬಾವಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ರು. 15 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಮೇಲ್ತೊಟ್ಟಿ ನಿರ್ಮಾಣ, ರು. 6 ಲಕ್ಷದಲ್ಲಿ ಅರಸಿಕೆರೆ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಗ್ರಾಪಂ ಕಾರ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು.
500 ಮನೆ ನಿರ್ಮಾಣ: ಬಸವ ವಸತಿ ಯೋಜನೆಯಡಿ ತಾಲೂಕಿಗೆ 1000 ಮನೆ ಮಂಜೂರು ಮಾಡುವಂತೆ ತಾವು ಸರ್ಕಾರಕ್ಕೆ ಮನವಿ ಮಾಡಿದ್ದು, ಇದೀಗ 500 ಮನೆ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಉಳಿದ 500 ಮನೆ ಮಂಜೂರಾತಿಗೂ ತಾವು ಪ್ರಯತ್ನಿಸುವುದಾಗಿ ತಿಳಿಸಿದರು.
ರು. 45 ಲಕ್ಷದಲ್ಲಿ ಬೊಂಬುಸರದಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲಾಗುವುದು. ಗಂಜಿಗೆರೆಯಲ್ಲಿ ಸೇವಾಲಾಲ್ ಸಮುದಾಯ ಭವನ ಮತ್ತು ಜಟಾಧರಸ್ವಾಮಿ ಸಮುದಾಯ ಭವನಕ್ಕೆ ತಲಾ ರು. 1 ಲಕ್ಷ ಅನುದಾನ ನೀಡಲಾಗುವುದು ಎಂದು ಅವರು ತಿಳಿಸಿದರು.
ಮೂಡಲಗಿರಿಯಪ್ಪ ಮಾತನಾಡಿ, ಬಾವಿಕೆರೆ ಗ್ರಾಪಂನ್ನು ಸುವರ್ಣ ಗ್ರಾಮ ಪಟ್ಟಿಗೆ ಸೇರಿಸಬೇಕು, ಬಾವಿಕೆರೆ ಗ್ರಾಮಕ್ಕೆ ಕಾಲೇಜು ಅಗತ್ಯವಿದೆ ಎಂದು ತಿಳಿಸಿದರು.
ಮಹಾಬಲ, ತಾಪಂ ಕಾರ್ಯನಿರ್ವಾಹಕ ದೇವರಾಜಪ್ಪ ಮಾತನಾಡಿದರು. ಜಿಪಂ ಸದಸ್ಯೆ ಸುಧಾ ಅಮೃತೇಶ್, ಗ್ರಾಪಂ ಅಧ್ಯಕ್ಷ ಜ್ಯೋತಿಲಕ್ಷ್ಮಿ, ಉಪಾಧ್ಯಕ್ಷ ರಮೇಶ್, ಗ್ರಾಪಂ ಸದಸ್ಯ ವಸಂತಕುಮಾರ್ ಶೆಟ್ಟಿ, ಲತಾ, ಗೌರಿಬಾಯಿ, ಗ್ರಾಮಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು.