ಶಾಸಕರು ಸರ್ವಜ್ಞರಲ್ಲ, ಜನಸೇವಕರಷ್ಟೇ
ಚಿಕ್ಕಮಗಳೂರು: ಜನರಿಂದ ಆಯ್ಕೆಯಾದ ಶಾಸಕ ಸರ್ವಜ್ಞನಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಜನಸೇವಕ ಎಂದು ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಹೇಳಿದ್ದಾರೆ.
ತಾಲೂಕಿನ ಕೂದುವಳ್ಳಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಗಾದೆಯಂತೆ ನಾಗರಿಕರು ಸರ್ಕಾರಕ್ಕೆ ಕಟ್ಟಿದ ತೆರಿಗೆ ಹಣವನ್ನು ಗ್ರಾಮಾಭಿವೃದ್ಧಿಗೆ ತೊಡಗಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಜನಪ್ರತಿನಿಧಿಗಳಿಗೆ ಉತ್ತರ ಕೊಡುವ ತಾಳ್ಮೆ ಇರಬೇಕು. ಫಿರಂಗಿಯಿಂದ ಗುಂಡು ಹಾರಿಸುವ ಕಾಲ ಮಾಯವಾಗಿ ಆಕಾಶದಿಂದಲೆ ಬಾಂಬ್ ಹಾಕುವಂತ ಕಾಲ ಎದುರಾಗಿದೆ. ವೈಜ್ಞಾನಿಕವಾಗಿ ಎಷ್ಟು ಬೆಳೆದಿದ್ದೆವೊ ಅಷ್ಟೆ ಆತಂಕಕಾರಿ ಪರಿಸ್ಥಿತಿಯಲ್ಲಿದ್ದೇವೆ ಎಂದರು.
ರಾಜಿ ಇಲ್ಲ: ಅಭಿವೃದ್ಧಿ ಕಾರ್ಯಗಳು ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಬೇಕು. ಗುಣಮಟ್ಟದ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದರು.
ಕೂದುವಳ್ಳಿಯಲ್ಲಿ 40 ಲಕ್ಷ ವೆಚ್ಚದ ಸಹಕಾರ ಸಂಘದ ಕಟ್ಟಡಕ್ಕೆ ಶಂಕುಸ್ಥಾಪನೆ, 15 ಲಕ್ಷ ವೆಚ್ಚದ ಪಶು ಆಸ್ಪತ್ರೆ ಉದ್ಘಾಟನೆ, 21 ಲಕ್ಷದ ಸುವರ್ಣಗ್ರಾಮ ಯೋಜನೆಗೆ ಚಾಲನೆ, 25 ಲಕ್ಷ ರಸ್ತೆ ಅಭಿವೃದ್ಧಿ, ಎಸ್‌ಇಪಿ ವಿಶೇಷ ಘಟಕ ಯೋಜನೆಯಲ್ಲಿ ಕಾಲೋನಿಗಳಿಗೆ ಕಾಂಕ್ರಿಟ್ ರಸ್ತೆಗೆ 25 ಲಕ್ಷ ಸೇರಿದಂತೆ 1.25 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.
ಏಳಿಗೆಗೆ ಸಹಕಾರಿ: ಈ ಸಹಕಾರಿ ಸಂಘದಲ್ಲಿ ರೈತರಿಗೆ ಆದ್ಯತೆ ಕೊಟ್ಟು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉತ್ತಮವಾಗಿ ಆಡಳಿತ ನಡೆಸುತ್ತಿರುವುದು ಸಂಸ್ಥೆಯ ಏಳಿಗೆಗೆ ಸಹಕಾರಿಯಾಗಿದೆ. ಆರೋಪ- ಪ್ರತ್ಯಾರೋಪಕ್ಕಿಂತ ಅಭಿವೃದ್ಧಿಗೆ ಶ್ರಮಿಸುತ್ತಿರುವವರೊಂದಿಗೆ ಒಗ್ಗಟ್ಟಿನಿಂದ ಕೈಜೋಡಿಸುವಂತೆ ತಿಳಿಸಿದರು.
ಅಧಿಕಾರ ಶಾಶ್ವತವಲ್ಲ: ಸಹಕಾರ ಸಂಘದ ಅಧ್ಯಕ್ಷ ವಿ.ಪಿ. ಕೃಷ್ಣೇಗೌಡ ಮಾತನಾಡಿ, ಜನಪ್ರತಿನಿಧಿಗಳಿಗೆ ಅಧಿಕಾರ ಶಾಶ್ವತವಲ್ಲ. ನಮ್ಮ ಅಧಿಕಾರವಧಿಯಲ್ಲಿ ನಾವು ಮಾಡಿದ ಒಳ್ಳೆಯ ಕೆಲಸ ಶಾಶ್ವತವಾಗಿರುತ್ತದೆ ಎಂಬ ಅರಿವು ನನ್ನಲ್ಲಿದೆ. ಅದನ್ನರಿತು ಸ್ವಾರ್ಥ ಬಯಸದೆ ಸಂಸ್ಥೆಯ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದರು.
ಸಹಕಾರ ಸಂಘದಿಂದ 8.50 ಕೋಟಿ ಸಾಲ ನೀಡಲಾಗಿದ್ದು, 4.5 ಕೋಟಿ ಕೆಸಿಸಿ ಸಾಲ, 2.26 ಕೋಟಿ ರೈತರಿಗೆ ಸ್ವಂತ ಬಂಡವಾಳ ಸಾಲ ವಿತರಿಸಲಾಗಿದೆ. ಸಂಘದಲ್ಲಿ 4486 ಜನ ಸದಸ್ಯರಿದ್ದು, 886 ಜನರಿಗೆ ಸಾಲ ನೀಡಿ ಸಹಕರಿಸಲಾಗಿದ್ದು, ಹಿಂದಿನ ಸಾಲಿನಲ್ಲಿ 49.86 ಲಕ್ಷ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಹೇಮಾವತಿ ದೇವೇಗೌಡ, ತಾಲೂಕು ಪಂಚಾಯಿತಿ ಸದಸ್ಯೆ ಈರಮ್ಮ, ಮಾಜಿ ಅಧ್ಯಕ್ಷ ಡಿ.ಜೆ. ಸುರೇಶ್, ಗ್ರಾಪಂ ಅಧ್ಯಕ್ಷೆ ವಾಸಂತಿ, ನಿರ್ದೇಶಕರಾದ ಟಿ.ಕೆ. ನಾರಾಯಣಗೌಡ, ವಸಂತ, ಕೆ.ಪಿ. ರಾಜರತ್ನಂ, ಎಸ್.ಡಿ. ಉಮೇಶ್, ಬಿ.ಸಿ. ಹರೀಶ್, ಟಿ.ಇ. ಕೃಷ್ಣೇಗೌಡ, ವ್ಯವಸ್ಥಾಪಕ ಸಿ.ಎಚ್. ಲೋಕೇಶ್ ಗೌಡ ಉಪಸ್ಥಿತರಿದ್ದರು.