ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗೊಂದಲದ ಗೂಡಾದ ಮೆಸ್ಕಾಂ ಸಭೆ

Lingaraj Badiger
Updated On : 6 Mar 2014, 10:47 am

ಕೊಪ್ಪ: ತಾಲೂಕಿನ ವಿದ್ಯುತ್ ವಿತರಣೆಯಲ್ಲಿನ ದೋಷಗಳ ಬಗ್ಗೆ ಬುಧವಾರ ಮೆಸ್ಕಾಂ ಏರ್ಪಡಿಸಿದ್ದ ಜನಸಂಪರ್ಕ ಗೊಂದಲದ ಗೂಡಾಗಿ ಯಾವುದೇ ಫಲಶೃತಿಯಿಲ್ಲದೆ ಕೊನೆಗೊಂಡಿತು.
ಮೆಸ್ಕಾಂ ಪ್ರಭಾರಿ ಕಾರ್ಯಪಾಲಕ ಅಭಿಯಂತ ವಿಜಯಕುಮಾರ್, ಸ್ಥಳೀಯ ಎಂಜಿನಿಯರ್ ಗೋಪಾಲಕೃಷ್ಣ ನಡೆಸಿದ ಜನಸಂಪರ್ಕ ಸಭೆಯಲ್ಲಿ, ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚೆಗಿಂತ ಹೆಚ್ಚಾಗಿ ಜನಪ್ರತಿನಿಧಿಗಳ ಹಸ್ತಕ್ಷೇಪದ ಬಗ್ಗೆ ಹೆಚ್ಚಿನ ಚರ್ಚೆ ನಡೆಯಿತು.
ಕಾಟಾಚಾರಕ್ಕೆ ಸಭೆ: ಹಿಂದಿನ ಸಭೆಯಲ್ಲಿನ ತೀರ್ಮಾನ ಅನುಷ್ಠಾನಗೊಳಿಸದೇ ಒಂದೂವರೆ ವರ್ಷದ ನಂತರ ಕಾಟಾಚಾರಕ್ಕೆ ಜನಸಂಪರ್ಕ ಸಭೆ ಕರೆದಿರುವ ಬಗ್ಗೆ ತೀವ್ರ ಆಕ್ಷೇಪ ಕೇಳಿಬಂತು. ತಾಲೂಕಿನಲ್ಲಿ ಅನಿಯಮಿತವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಹರಿಹರಪುರ, ಜಯಪುರ, ನಾರ್ವೆಗಳಿಗೆ ಅಗತ್ಯ ಲೈನ್ ಮ್ಯಾನ್ ನೇಮಿಸಲಾಗುತಿಲ್ಲ. ಕಾಫಿ ತೋಟದ ಮಾಲೀಕರಿಗೆ ಅಕ್ರಮವಾಗಿ ವಿದ್ಯುತ್ ಮಾರಾಟ ಮಾಡಿ, ಗ್ರಾಮೀಣ ಜನರಿಗೆ ಸಮರ್ಪಕ ವಿದ್ಯುತ್ ಪೂರೈಸಲಾಗುತಿಲ್ಲ ಎಂದು ದೂರಲಾಯಿತು.
ವಿದ್ಯುತ್ ಪರಿವರ್ತಕ ಅಳವಡಿಕೆಗೆ ಮೀನಮೇಷ ಎಣಿಸುವ ಇಲಾಖೆ ವಸೂಲಿ ಬಾಜಿ ನಡೆಸುತಿದೆ ಎಂದು ಸಭೆಯಲ್ಲಿ ದೂರಲಾಯಿತು.
ನೀರಾವರಿ ವಿದ್ಯುತ್ ಪಂಪ್‌ಸೆಟ್‌ಗಳಿಗೆ, ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಗುಣಾತ್ಮಕ ವಿದ್ಯುತ್ ಪೂರೈಕೆಗೆ ಸಭೆ ಒತ್ತಾಯಿಸಿತು. ಜಯಪುರಕ್ಕೆ ಲೈನ್‌ಮ್ಯಾನ್ ನೇಮಕಾತಿಯಲ್ಲಿ ಸಂಸದರ ಹಸ್ತಕ್ಷೇಪದ ನೆಪ ಒಡ್ಡುತ್ತಿರುವ ಮೆಸ್ಕಾಂ ಕ್ರಮವನ್ನು ತಾಪಂ ಸದಸ್ಯ ಬಿ.ಆರ್. ನಾರಾಯಣ್ ತೀವ್ರವಾಗಿ ವಿರೋಧಿಸಿದರು.
ತೀವ್ರ ಆಕ್ಷೇಪ: ಈ ಸಂದರ್ಭದಲ್ಲಿ ಅನಗತ್ಯವಾಗಿ ಸಂಸದರ ಹೆಸರು ಎಳೆದು ತಂದಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಭೆ ನಂತರ ಸ್ಪಷ್ಟನೆ ನೀಡಿದ ಎಂಜಿನಿಯರ್ ವಿಜಯಕುಮಾರ್, ಸಂಸದರಾಗಲೀ, ಶಾಸಕರಾಗಲೀ ಯಾವುದೇ ಹಸ್ತಕ್ಷೇಪ ನಡೆಸಿಲ್ಲ ಎಂದರು.
ಗುಡ್ಡೆಕೊಪ್ಪದ ರೈತನೊಬ್ಬ ಬೆಳೆದ ಬಾಳೆಗೆ ನೀರು ಸರಬರಾಜು ಮಾಡುವ ವಿದ್ಯುತ್ ಪಂಪ್‌ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದ ಬಗ್ಗೆ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಸ್.ಎನ್. ರಾಮಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶೋಭಿಂತ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾಬಲ, ತಾಲೂಕು ಅಧ್ಯಕ್ಷ ಬಿ.ಎನ್. ಭಾಸ್ಕರ್, ಎಪಿಎಂಸಿ ಅಧ್ಯಕ್ಷ ಓಣಿತೋಟ ರತ್ನಾಕರ್, ತಾಪಂ ಅಧ್ಯಕ್ಷರಾದ ಪದ್ಮಾವತಿ ರಮೇಶ್, ಉಪಾಧ್ಯಕ್ಷ ಪೂರ್ಣಚಂದ್ರ, ಗ್ರಾಪಂ ಸದಸ್ಯ ರವಿಕುಮಾರ್, ವಾಸಪ್ಪ, ಅನಿಲ್ ಇತರರು ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement