ನೀತಿ ಸಂಹಿತೆ ಜಾರಿ: ಜಿಲ್ಲಾಡಳಿತ ಸಿದ್ಧತೆ
ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಏ.17ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ಬುಧವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.
ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟಗೊಳಿಸುತ್ತಿದ್ದಂತೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್ ಅವರ ಸಭೆಯನ್ನು ನಡೆಸಿದರು.
ಬಳಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 8,38,894 ಮತದಾರರು ಇದ್ದು, ಈ ಪೈಕಿ 4,24,858 ಪುರುಷರು, 4,14,004 ಮಹಿಳಾ ಮತದಾರರು ಹಾಗೂ 32 ಮಂದಿ ಇತರೆ ಮತದಾರರು ಜಿಲ್ಲೆಯಲ್ಲಿದ್ದಾರೆ ಎಂದರು.ಜಿಲ್ಲೆಯಲ್ಲಿ 1168 ಮತಗಟ್ಟೆಗಳಿದ್ದು, ಅವುಗಳಲ್ಲಿ 422 ಸೂಕ್ಷ್ಮ, 237 ಅತಿಸೂಕ್ಷ್ಮ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 52 ಮತಗಟ್ಟೆಗಳಿವೆ. 5671 ಮತಗಟ್ಟೆ ಅಧಿಕಾರಿಗಳನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ವಾಹನ ಹಿಂಪಡೆಯಲು ಸೂಚನೆ: ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅನುಮತಿ ಪಡೆಯದೆ ಸಭೆಯನ್ನು ನಡೆಸಬಾರದು.
ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಸಮಾರಂಭವನ್ನು ಸಹ ನಡೆಸಬಾರದು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳುವಂತ್ತಿಲ್ಲ. ಗಣ್ಯ ಜನಪ್ರತಿನಿಧಿಗಳು ಬಳಸಿಕೊಳ್ಳುತ್ತಿದ್ದ ಸರ್ಕಾರಿ ವಾಹನಗಳನ್ನು ಹಿಂದಕ್ಕೆ ಪಡೆಯುವಂತೆ ತಾಲೂಕು ತಹಸೀಲ್ದಾರ್ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಜನಪ್ರತಿನಿಧಿಗಳು ಸಭೆ, ಸಮಾರಂಭಗಳಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವಂತಿಲ್ಲ, ಭರವಸೆಯನ್ನು ಸಹ ನೀಡುವಂತಿಲ್ಲ, ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಸಭೆ, ಸಮಾರಂಭ ನಡೆಸಬೇಕಾದರೆ ಕಾನೂನುಬದ್ಧವಾಗಿ ಅನುಮತಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಪಂ ಸಿಇಒ ಕರುಣಾಕರ್, ಉಪ ವಿಭಾಗಾಧಿಕಾರಿಗಳಾದ ಚೆನ್ನಬಸಪ್ಪ, ಅನುರಾಧಾ ಹಾಗೂ ತಹಸೀಲ್ದಾರ್ ಹಾಜರಿದ್ದರು.