ಬದಲಾವಣೆಗೆ ತಕ್ಕಂತೆ ತರಬೇತಿ ಅಗತ್ಯ: ಡಾ.ಶಂಕರ್
ನರಸಿಂಹರಾಜಪುರ: ಕೊಪ್ಪ ಲ್ಯಾಂಪ್ಸ್ ಸಹಕಾರ ಸಂಘವು ರಾಜ್ಯದಲ್ಲೇ ಅತ್ಯುತ್ತಮ ಸಹಕಾರ ಸಂಘ ಎಂದು ಹೆಸರು ಪಡೆದಿದೆ ಎಂದು ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಲ್ಯಾಂಪ್ಸ್ ಅಧ್ಯಕ್ಷ ಡಾ. ಪಿ. ಶಂಕರ್ ತಿಳಿಸಿದರು.
ಬುಧವಾರ ಟಿಎಪಿಸಿಎಂಸಿ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೊಪ್ಪ ಲ್ಯಾಂಪ್ಸ್ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಸಂಘದ ಸದಸ್ಯರಿಗೆ ಒಂದು ದಿನದ ಆದಾಯ ಉತ್ಪನ್ನ ತರಬೇತಿ ಹಾಗೂ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸದಸ್ಯರು ಆರ್ಥಿಕವಾಗಿ ಮುಂದೆ ಬರಲು ಅನುಕೂಲವಾಗುವಂತೆ ತಮ್ಮ ವೃತ್ತಿಯಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಬೇಕಾಗಿದೆ. ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳಲು ತರಬೇತಿ ಅಗತ್ಯವಾಗಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿ ವರ್ಷ ತರಬೇತಿ ನೀಡುತ್ತಿದ್ದೇವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿಕ್ಕಮಗಳೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಟಿ. ವೆಂಕಟೇಶ್ ಮಾತನಾಡಿ, ಹಿಂದಿನ ಕಾಲದಲ್ಲಿ ಆದಿವಾಸಿಗಳನ್ನು ಕೀಳು ಮಟ್ಟದಿಂದ ಕಾಣಲಾಗುತ್ತಿತ್ತು. ಈಗ ಕಾಲ ಬದಲಾಗಿದ್ದು, ಆದಿವಾಸಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತಿದ್ದಾರೆ ಎಂದು ಹೇಳಿದರು.
ಕೊಪ್ಪ ಲ್ಯಾಂಪ್ಸ್ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ. ಸೀತಾರಾಮ ರೈ ಮಾತನಾಡಿ, ಕೊಪ್ಪ ಲ್ಯಾಂಪ್ಸ್ ಸಹಕಾರ ಸಂಘವು ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬರುತ್ತದೆ. ಗ್ರಾಹಕರಿಗೆ ಅಗತ್ಯವಾದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ. 2,300 ಸದಸ್ಯರಿಗೆ ಯಶಸ್ವಿನಿ ಕಾರ್ಡ್ ಮಾಡಿಸಿಕೊಟ್ಟಿದ್ದು, ಸದಸ್ಯರು 4 ಲಕ್ಷ ಪ್ರಯೋಜನ ಪಡೆದುಕೊಂಡಿದ್ದಾರೆ. ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಧನ, ಅಪಘಾತ ವಿಮೆ ಮಾಡಿಸಿದ್ದೇವೆ ಎಂದರು.
ಮುಖ್ಯ ಅತಿಥಿಗಳಾಗಿ ಕೊಪ್ಪ ಲ್ಯಾಂಪ್ಸ್ ಸಹಕಾರ ಸಂಘದ ಉಪಾಧ್ಯಕ್ಷ ಎನ್. ಜಯರಾಂ, ನಿರ್ದೇಶಕರಾದ ಎಂ. ಮಹೇಶ್, ಕೆಂಪೇಗೌಡ,ನಾರಾಯಣ ನಾಯರ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಸಹಾಯಕ ಯೋಜನಾಧಿಕಾರಿ ಎಚ್.ಡಿ. ಮಂಜುನಾಥ್ 1997ರ ಸಹಕಾರ ಕಾಯ್ದೆ ತಿದ್ದುಪಡಿ, ಸದಸ್ಯರ ಕರ್ತವ್ಯ, ಹಕ್ಕು ಎಂಬ ವಿಷಯಗಳ ಬಗ್ಗೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ರಿಯಾಜ್ ಅಹಮದ್ ಕೈಗಾರಿಕೆ ಉತ್ತೇಜನ ಮತ್ತು ಇಲಾಖೆಯಿಂದ ಸಿಗುವ ಸೌಲಭ್ಯ ಹಾಗೂ ಕೊಪ್ಪ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ಭಾನು ಮನೆಯಲ್ಲೇ ಮದ್ದು ತಯಾರಿಕೆ ಎಂಬ ವಿಷಯದ ಬಗ್ಗೆ ತರಬೇತಿ ನೀಡಿದರು.
ಎಚ್.ಡಿ. ಮಂಜುನಾಥ್ ಸ್ವಾಗತಿಸಿದರು. ಶೆಟ್ಟಿಕೊಪ್ಪ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.