ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಹಳ್ಳಿಗಳನ್ನು ವೃದ್ಧಾಶ್ರಮಗಳನ್ನಾಗಿ ಮಾಡಬೇಡಿ'

Lingaraj Badiger
Updated On : 6 Mar 2014, 10:53 am

ಮಲೆನಾಡಿನ ಹಳ್ಳಿಗಳ, ಎಲ್ಲಾ ರೀತಿಯಿಂದಲೂ ಶುದ್ಧವಾದ ಪರಿಸರವನ್ನು, ಆಧುನಿಕವಾದುದನ್ನು ಹಿತಮಿತವಾಗಿ ಅಳವಡಿಸಿಕೊಳ್ಳುವುದರ ಜೊತೆಗೆ ಪ್ರೀತಿಯಿಂದ ಉಳಿಸಿಕೊಳ್ಳೋಣ. ಹಳ್ಳಿಗಳನ್ನು ವೃದ್ಧಾಶ್ರಮಗಳನ್ನಾಗಿ ಮಾಡದೇ ಹಿರಿಯರನ್ನು ಪ್ರೀತಿ ಗೌರವದಿಂದ ಕಾಣುವ ಸಂಸ್ಕೃತಿಯನ್ನು ಬೆಳೆಸೋಣ ಎಂದು ನರಸಿಂಹರಾಜಪುರ ತಾಲ್ಲೂಕು ಏಳನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಡಾ. ವಿದ್ಯಾಭೂಷಣ್ ಹೇಳಿದ್ದಾರೆ.
ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ನಮ್ಮ ಯುವಕರಲ್ಲಿ ಕೆಲವರಾದರೂ ದೂರದ ಪಟ್ಟಣದ ಆಕರ್ಷಣೆಯನ್ನು ತೊರೆದು, ಹಳ್ಳಿಗಳಲ್ಲೇ ಇದ್ದು. ಬದುಕಿನಲ್ಲಿ ಹೊಸ ಆವಿಷ್ಕಾರಗಳನ್ನು ಹುಟ್ಟು ಹಾಕಿ, ಯಶಸ್ವಿಗಳಾಗಬೇಕು. ಗ್ರಾಮೀಣ ಹಬ್ಬ ಹರಿದಿನಗಳನ್ನು, ಆಟೋಟ ಕಲಾ ಸಂದರ್ಭಗಳನ್ನು ಎಲ್ಲರೂ ಕಲೆತು ಆಚರಿಸುವ ಸಾತ್ವಿಕ ಸಂಭ್ರಮವನ್ನು ಮತ್ತೆ ಅನುಭವಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಪಟ್ಟಣದ ಮಕ್ಕಳೂ ತಮ್ಮ ಹಿರಿಯರೊಂದಿಗೆ ಹಳ್ಳಿಯ ಪರಿಸರದಲ್ಲಿ ಸಂಭ್ರಮಿಸುವಂತಾಗಬೇಕು. ಗ್ರಾಮೀಣ ಭಾಗದಲ್ಲಿ ನೋಡಲು ಬೆಳದಿಂಗಳಿದೆ. ಅಲೆಯಲು ಕಾಡು-ಮೇಡುಗಳಿವೆ. ಆಡಲು ನೀರತೊರೆಗಳಿವೆ, ಕೆರೆಗಳಿವೆ, ವಿಶಾಲ ಮೈದಾನಗಳಿವೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಶುದ್ಧ ಹಾಗೂ ಉದಾರ ಮನಸ್ಸುಗಳು ಇವೆ ಎಂಬುದನ್ನು ಪಟ್ಟಣದ ಜನರಿಗೆ ತಿಳಿ ಹೇಳುವ ಯತ್ನ ಮಾಡಬೇಕಿದೆ ಎಂದರು.
ಕನ್ನಡ ಸಾಹಿತ್ಯ, ಭಾಷೆ ಬೆಳೆಯಬೇಕಾದರೆ ಪ್ರತಿಯೊಬ್ಬರ ಮನೆಗಳಲ್ಲೂ ಪುಸ್ತಕ ಸಂಗ್ರಹವಿರಬೇಕು. ದಿನಪತ್ರಿಕೆಗಳನ್ನು, ಅದರಲ್ಲಿರುವ ವಿಶೇಷ ಲೇಖನಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಹೀಗಾದಾಗ ಮಾತ್ರ ನಮ್ಮ ಭಾಷೆ ಬೆಳೆಯಲು ಸಾಧ್ಯವಾಗುತ್ತದೆ.
  ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಹರಿದಾಸ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನವಿದ್ದು, ವೇದೋಪನ್ನಿಷತ್ತುಗಳ ಮೂಲ ಆಶಯಗಳಾದ ಜ್‌ಞಾನ, ಭಕ್ತಿ ಮತ್ತು ಜೀವನ ಮೌಲ್ಯಗಳನ್ನು ಕನ್ನಡ ಆಡು ನುಡಿಯಲ್ಲಿ ಪ್ರತಿಪಾದಿಸಿ ಹರಿದಾಸ ಆಂದೋಲನದ ಪರಿಕಲ್ಪನೆ ಧನ್ಯತೆಯನ್ನು ಕಂಡಿದೆ. ತನ್ನ ಆಶಯವನ್ನು ಮನೆ, ಮನ ಮುಟ್ಟುವ ತವಕದಲ್ಲಿ  ಸಂಗೀತದಂತಹ ಶ್ರೇಷ್‌ಠ ಮಾಧ್ಯಮವನ್ನು ಮುಟ್ಟಿ ಯಶಸ್ವಿಯಾಗಿದೆ ಎಂದು ಹೇಳಿದರು.
ಭಾರತೀಯ ಸಂಗೀತದ ವಿಶಿಷ್ಟ ಪ್ರಾಕಾರವಾದ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಸ್ಪಷ್ಟ ರೂಪವನ್ನು ನೀಡಿದ ಹೆಗ್ಗಳಿಕೆಯೂ ಅದಕ್ಕಿದ್ದು, ದಕ್ಷಿಣ ಭಾರತದ ಉದ್ದಗಲಕ್ಕೂ, ಇಂದಿಗೂ ಪುರಂದರದಾಸರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿಯೇ ಸಂಗೀತದ ಬಾಲಪಾಠಗಳು ನಡೆಯುತ್ತಿವೆ. ಇಂದಿನ ದಿನಗಳಲ್ಲಿ ಕನ್ನಡ ನಾಡು-ನುಡಿಯ ಕುರಿತಾಗಿ ವರ್ಷದ ಒಂದು ದಿನ, ತಿಂಗಳಿಡೀ ಉತ್ಸವವನ್ನು ಆಚರಿಸಲಾಗುತ್ತಿದೆ.
ಉತ್ತರ ಕರ್ನಾಟಕದ ಹಲವೆಡೆ ಬೇರೆ ಹಬ್ಬಗಳಿಗಿಂತ ಮಿಗಿಲಾಗಿ ನ್ಮಡಿತೇರೆಂದು ಕನ್ನಡದ ರಥೋತ್ಸವವನ್ನು ಮಾಡಲಾಗುತ್ತದೆ. ಆದರೆ ಶಿವಶರಣರು, ಹರಿದಾಸರು ಬೇರೊಂದೇ ರೀತಿಯಿಂದ, ನೂರಾರು ವರ್ಷಗಳ ಹಿಂದೆಯೇ ನುಡಿಹಬ್ಬವನ್ನು ಆಚರಿಸಿ ತೋರಿದರು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement