ಕಾಫಿಗೆ ನ್ಯಾಯಯುತ ಬೆಲೆ ನೀಡಲು ಆಗ್ರಹ
ಚಿಕ್ಕಮಗಳೂರು: ಕಾಫಿ ಖರೀದಿಸುವ ಕಂಪನಿಗಳು ಮತ್ತು ಕ್ಯೂರಿಂಗ್ ವರ್ಕ್ಸ್‌ಗಳು, ಕಾಫಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಕಾರ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಕಾಫಿ ಮಂಡಳಿ ಸದಸ್ಯ ಡಿ.ಎಂ. ವಿಜಯ್ ಒತ್ತಾಯಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಫಿಗೆ ಉತ್ತಮ ಬೆಲೆ ಸಿಗುತ್ತಿದೆ. ಆದರೆ, ಅಲ್ಲಿ ಏರಿಕೆಯಾದ ಬೆಲೆಗನುಗುಣವಾಗಿ ಇಲ್ಲಿ ಕಾಫಿ ಖರೀದಿಸುವ ಕಂಪನಿಗಳು ಮತ್ತು ಕ್ಯೂರಿಂಗ್ ವರ್ಕ್ಸ್‌ಗಳು ಬೆಲೆ ನಿಗದಿ ಮಾಡದೆ ಬೆಳೆಗಾರರನ್ನು ವಂಚಿಸುತ್ತಿವೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ 8 ಸೆಂಟ್ಸ್‌ನಷ್ಟು ಇಳಿಕೆಯಾದಾಗ ಇಲ್ಲಿ ಕಂಪನಿಗಳು ಮತ್ತು ಕ್ಯೂರಿಂಗ್ ವರ್ಕ್ಸ್‌ಗಳು 500 ಬೆಲೆ ಕಡಿಮೆ ಮಾಡಿದ್ದವು. ಈಗ ಮಾರುಕಟ್ಟೆಯಲ್ಲಿ 16 ಸೆಂಟ್ಸ್ ಏರಿಕೆಯಾಗಿದ್ದರೆ ಇಲ್ಲಿ ಬರೀ 500 ಹೆಚ್ಚಳ ಮಾಡುವ ಮೂಲಕ ಬೆಳೆಗಾರರನ್ನು ವಂಚಿಸುತ್ತಿವೆ ಎಂದು ದೂರಿದ್ದಾರೆ.
ಬೆಳೆಗಾರರಿಗೆ ನಷ್ಟ: ಮೊದಲೇ ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಕುಂಠಿತ, ಕಾರ್ಮಿಕರ ಸಮಸ್ಯೆ, ಉತ್ಪಾದನಾ ವೆಚ್ಚ ಹೆಚ್ಚಳ, ಗಿಡಗಳಿಗೆ ರೋಗಬಾಧೆಯಿಂದ ನಲುಗುತ್ತಿರುವ ಕಾಫಿ ಬೆಳೆಗಾರರು ಕಂಪನಿಗಳು ಮತ್ತು ಕ್ಯೂರಿಂಗ್ ವರ್ಕ್ಸ್‌ಗಳ ಈ ನೀತಿಯಿಂದಾಗಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಫಿ ಖರೀದಿಸುವ ಕಂಪನಿಗಳು ಮತ್ತು ಕ್ಯೂರಿಂಗ್ ವರ್ಕ್ಸ್‌ಗಳು ತಪ್ಪು ಮಾಹಿತಿ ನೀಡಿ ಬೆಳೆಗಾರರ ದಾರಿ ತಪ್ಪಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿರುವ ಅವರು, ಈ ಬಾರಿ ಕಾಫಿಗೆ 6300 ಬೆಲೆ ಇದ್ದ ಸಂದರ್ಭದಲ್ಲಿ ಇದೇ ಅಂತಿಮ ಬೆಲೆ ಏರಿಕೆಯಾಗಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಏರಿಕೆಯಾಗುವುದಿಲ್ಲ ಎಂದು ಕಂಪನಿಗಳು ಮತ್ತು ಕ್ಯೂರಿಂಗ್ ವರ್ಕ್ಸ್‌ಗಳು ತಪ್ಪು ಮಾಹಿತಿ ನೀಡಿದ್ದವು. ಅದನ್ನು ನಂಬಿ ತಮ್ಮಲ್ಲಿದ್ದ ಕಾಫಿಯನ್ನು ಮಾರಾಟ ಮಾಡಿದ ಪರಿಣಾಮ ಬೆಳೆಗಾರರು ಇದೀಗ ಉತ್ತಮ ಬೆಲೆ ಇದ್ದರೂ ಮಾರಾಟ ಮಾಡಲು ಕಾಫಿ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ವೆಬ್‌ಸೈಟ್‌ನಲ್ಲಿ ಮಾಹಿತಿ: ಬೆಳೆಗಾರರು ಕಾಫಿಯನ್ನು ಕ್ಯೂರಿಂಗ್ ವರ್ಕ್ಸ್‌ಗಳಲ್ಲಿಟ್ಟು ಮೋಸ ಹೋಗುವ ಬದಲು ತಮ್ಮ ಮನೆಗಳಲ್ಲೆ ದಾಸ್ತಾನು ಮಾಡಬೇಕು ಎಂದು ಕಿವಿಮಾತು ಹೇಳಿರುವ ಅವರು, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವ ಏರುಪೇರು ಮತ್ತು ಅದರಿಂದ ಇಲ್ಲಿ ನಿಗದಿಗೊಳಿಸಬೇಕಾದ ಬೆಲೆಯ ಮಾಹಿತಿಯನ್ನು ಕಾಫಿ ಮಂಡಳಿಯ ವೆಬ್‌ಸೈಟ್‌ನಲ್ಲಿ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆ ದರದ ಪ್ರಕಾರ ಇಲ್ಲಿ ಕಾಫಿ ಬೆಲೆ ನಿಗದಿಗೊಳಿಸುವ ಮೂಲಕ ಉತ್ಪಾದನೆ ವೆಚ್ಚ ಹೆಚ್ಚಾಗಿ ಮೊದಲೇ ನಷ್ಟ ಅನುಭವಿಸುತ್ತಿರುವ ಬೆಳೆಗಾರರ ಸಂಕಷ್ಟಕ್ಕೆ ಕಂಪನಿಗಳು ಮತ್ತು ಕ್ಯೂರಿಂಗ್ ವರ್ಕ್ಸ್‌ಗಳು ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.