ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತಂದೆ- ತಾಯಿ ಸಾಕುವುದು ಮಕ್ಕಳ ಕರ್ತವ್ಯ

Lingaraj Badiger
Updated On : 7 Mar 2014, 11:27 am

ಕ.ಪ್ರ.ವಾರ್ತೆ, ಬಾಳೆಹೊನ್ನೂರು, ಮಾ. 6
ವೃದ್ಧ ತಂದೆ, ತಾಯಿಯರನ್ನು ಸಾಕಿ, ಸಲಹುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯವಾಗಿದ್ದು, ಈ ಮಹತ್ತರ ಜವಾಬ್ದಾರಿ ನಿಭಾಯಿಸುವ ಮೂಲಕ ಹೆತ್ತವರ ಋಣ ತೀರಿಸಬೇಕೆಂದು ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ ಹೇಳಿದ್ದಾರೆ.
ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರು ನಗರದೆಡೆಗೆ ಮುಖ ಮಾಡುತ್ತಿರುವುದರಿಂದ ಹಳ್ಳಿಗಳು ವೃದ್ಧಾಶ್ರಮಗಳಾಗಿ ಗೋಚರಿಸುತ್ತಿದ್ದು, ತಂದೆ- ತಾಯಿಯರ ದುಃಖ- ದುಮ್ಮಾನಗಳಿಗೆ ಸ್ಪಂದಿಸುವ ಮಕ್ಕಳ ಸಂಖ್ಯೆ ವಿರಳವಾಗುತ್ತಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ತಂದೆ- ತಾಯಿಯವರನ್ನು ನೋಡಿಕೊಳ್ಳದ ಹಾಗೂ ವೃದ್ಧಾಶ್ರಮಕ್ಕೆ ತಳ್ಳುವವರ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕುವ ಚಿಂತನೆಗಳು ಗರಿಗೆದರಿದಬೇಕೆಂದರು.
ವಿಶ್ವ ಮಾನವ ಸಂದೇಶ: ಸಿಡಿಎ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಭ್ರಷ್ಟ ರಾಜಕಾರಣ ಜನರ ಹೃದಯ ಮನಸ್ಸುಗಳನ್ನು ಮಲೀನಗೊಳಿಸಿದ್ದು, ನೈತಿಕ ಮೌಲ್ಯಗಳು ಕ್ಷೀಣಿಸುತ್ತಿವೆ. ಇಂತಹ ಸಂದಿಗ್ಧತೆಯಿಂದ ಸಮಾಜವನ್ನು ಪಾರು ಮಾಡಲು ಜಿ.ಎಸ್. ಶಿವರುದ್ರಪ್ಪನವರ ಸ್ನೇಹ- ಪ್ರೀತಿ ಸಾರುವ ಕಾವ್ಯ, ಬಸವಣ್ಣ, ಕುವೆಂಪುರವರ ವಿಶ್ವ ಮಾನವ ಸಂದೇಶ, ಜಾತ್ಯತೀತ ನಿಲುವು ಪಾಲಿಸುವುದು ಅಗತ್ಯ ಎಂದರು.
ಬಿ.ಎಸ್.ಪಿ. ಮುಖಂಡ ಕೆ.ಟಿ. ರಾಧಾಕೃಷ್ಣ ಮಾತನಾಡಿ, ಸಮಾಜದಲ್ಲಿ ಬೇರೂರಿರುವ ಮೌಢ್ಯತೆ, ಶೋಷಕ ವ್ಯವಸ್ಥೆ ಹೋಗಾಡಿಸಲು ಶ್ರಮಿಸಬೇಕಾಗಿದ್ದು, ವೈಚಾರಿಕ ಸಾಹಿತ್ಯದಿಂದ ಸಾಮಾಜಿಕ ಜಾಗೃತಿ ಸಾಧ್ಯ ಎಂದು ಹೇಳಿದರು.
ಐಕ್ಯತೆ ಕಾಪಾಡಿ: ಸಿಪಿಐ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ ಮಾತನಾಡಿ, ಸಾಹಿತ್ಯ ಸಂಭ್ರಮದ ಮೂಲಕ ಹಳ್ಳಿಗಳಲ್ಲಿ ಒಡೆದ ಮನಸ್ಸು ಬೆಸೆಯುವ ಕೆಲಸ ಆಗುತ್ತಿದ್ದು, ಗ್ರಾಮೀಣ ಕಲೆಗಳ ತಟಸ್ತತೆಯ ಪರಿಣಾಮ ಗ್ರಾಮೀಣ ಸಂಸ್ಕೃತಿ ಸೊರಗುತ್ತಿದೆ. ಜನರು ಐಕ್ಯತೆಯನ್ನು ಕಾಯ್ದುಕೊಂಡು ಬರಬೇಕೆಂದರು.
ಸಿಂದಿಗೆರೆ ವಿನಾಯಕ ಮಾತನಾಡಿ, ವೈವಿಧ್ಯತೆಗಳಿಂದ ಕೂಡಿರುವ ಗ್ರಾಮೀಣ ಪ್ರದೇಶಗಳನ್ನು ಸಂಪದ್ಭರಿತಗೊಳಿಸುವತ್ತ ನಮ್ಮ ಚಿತ್ತವಿರಬೇಕೆಂದು ಸಲಹೆ ನೀಡಿದರು.
ಸತ್ಯರಹಿತ: ಸಮಾರೋಪ ಭಾಷಣ ಮಾಡಿದ ನಾಟಕಕಾರ ಬಿ. ಚಂದ್ರೇಗೌಡ, ಕೃಷಿ ಮೂಲವಾದ ಬದುಕು ಅತ್ಯಂತ ಶ್ರೇಷ್ಠವಾದರೂ ಅದನ್ನು ನಿರ್ಲಕ್ಷಿಸಿ ಹಳ್ಳಿಗಳನ್ನು ತೊರೆದರೆ ತನ್ನತನವೆ ನಾಶವಾಗಿ ಬದುಕು ಸತ್ಯರಹಿತವಾಗುತ್ತದೆ ಎಂದರು.
ಜಾಗತೀಕರಣ ನಗರಗಳನ್ನು ಬೆಳೆಯುವಂತೆ ಮಾಡುತ್ತಿದ್ದು, ಗ್ರಾಮಗಳು ನಿರ್ಲಕ್ಷ್ಯಕ್ಕೊಳಗಾಗುತ್ತಿವೆ. ಮನುಷ್ಯ ಸಂಬಂಧಗಳು ಸಂಕೀರ್ಣಗೊಂಡು ಗ್ರಾಮ್ಯ ಸಂಸ್ಕೃತಿ ನಡೆಸುತ್ತಿದೆ. ಜಾನಪದ ಸಂಸ್ಕೃತಿಯನ್ನು ಪುನರ್ ಸ್ಥಾಪಿಸುವ ಮುಖೇನ ಗ್ರಾಮೀಣ ಸೊಬಗು ಅಚ್ಚ ಹಸುರಾಗಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಕಟ್ಟೆ ಪುರಾಣ ನಾಟಕವನ್ನು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿದರು. ಕೆ.ಎನ್. ಪ್ರಸಾದ್ ಸ್ವಾಗತಿಸಿ, ಪಂಚಾಕ್ಷರಯ್ಯ ವಂದಿಸಿದರು. ಕೆ.ಪಿ. ಲೋಕೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement