ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಧ್ಯಾತ್ಮದಿಂದ ನೆಮ್ಮದಿ ಬದುಕು: ಡಾ. ಗುರುರಾಜ

Rashmi Kasaragodu
Updated On : 8 Mar 2014, 11:53 am

ಚಿಕ್ಕಮಗಳೂರು: ಯೋಗದ ಮೂಲಕ ತ್ರಿಕಾಲ ಜ್ಞಾನವನ್ನರಿಯುವುದಲ್ಲದೆ ವಂಶವಾಹಿನಿಯಾಗಿ ಬರುವ ಅನೇಕ ರೋಗ ನಿಯಂತ್ರಿಸಬಹುದು ಎಂದು ಬಾಗಲಕೋಟೆಯ ಶ್ರೀಕೃಷ್ಣಾಶ್ರಮದ ಯೋಗ ಗುರು ಡಾ. ಬಸವರಾಜ ಹಡಗಲಿ ಹೇಳಿದ್ದಾರೆ.
ನಗರದ ಯುರೇಕಾ ಅಕಾಡೆಮಿಯಲ್ಲಿ ಉದ್ಭವ ಪ್ರಕಾಶನ ಮತ್ತು ಯುರೇಕಾ ಅಕಾಡೆಮಿ ಗುರುವಾರ ಸಂಜೆ ಏರ್ಪಡಿಸಿದ್ದ ಯೋಗ ಮತ್ತು ಆರೋಗ್ಯ ಎಂಬ ವಿಷಯ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವರು ಆಸನಗಳನ್ನೇ ಯೋಗ ಎಂದು ತಪ್ಪಾಗಿ ಭಾವಿಸಿದ್ದಾರೆ. ಆಸನ, ಪ್ರಾಣಾಯಾಮ, ಧ್ಯಾನ ಇವೆಲ್ಲ ಯೋಗದ ಒಂದೊಂದು ಅಂಗಗಳು. ಯೋಗ ಎಂಬುದು ಆಂತರಿಕ ಅನುಭೂತಿ, ಸ್ವಾನುಭವದಿಂದ ಪಡೆಯುವ ಸಿದ್ಧಿ ಎಂದು ವಿಶ್ಲೇಷಿಸಿದರು.
ಇಂದು ಯಾತ್ರಿಕ ಬದುಕು ಮನುಷ್ಯನನ್ನು ಆವರಿಸಿದೆ. ಹಣ ಮಾಡುವ ಕಾತರ ಹೆಚ್ಚಿದೆ. ಲೌಕಿಕ ಸಂಪತ್ತನ್ನೆ ಸುಖ ಎಂದು ಜನರು ಭ್ರಮಿಸಿದ್ದಾರೆ. ಇದರಿಂದ ಮನದಲ್ಲಿ ವ್ಯಾಕುಲತೆ, ದ್ವಂದ್ವ, ಆತಂಕ ಹೆಚ್ಚಿ, ಅನಾರೋಗ್ಯಕ್ಕೆ ಕಾರಣವಾಗಿದೆ. ಅಧ್ಯಾತ್ಮದತ್ತ ಮುಖ ಮಾಡಿದರೆ ಮಾತ್ರ ನೆಮ್ಮದಿ ಸಾಧ್ಯ ಎಂದು ಹೇಳಿದರು.
ಸಂವೇದನೆ: ಸಾವಧಾನವಾಗಿ ಬದುಕನ್ನು ಸಿಂಹಾವಲೋಕನ ಮಾಡಿದಾಗ ಮಾತ್ರ ನಾವು ಎಷ್ಟು ಸಮಯವನ್ನು ವ್ಯರ್ಥವಾಗಿ ಕಳೆದಿದ್ದೇವೆ ಎಂಬ ಅರಿವಾಗುತ್ತದೆ. ಆಸನಗಳು ದೇಹದ ತೂಕ ಕಡಿಮೆ ಮಾಡುವುದರ ಮೂಲಕ ಆರೋಗ್ಯಮಯ ಸಂವೇದನೆಯನ್ನುಂಟು ಮಾಡುತ್ತವೆ. ಆಂತರಿಕ ಜ್ಞಾನಸಿದ್ಧಿಯೇ ನಿಜವಾದ ಯೋಗ ಎಂದ ಅವರು, ಮನಸ್ಸನ್ನು ನಿಯಂತ್ರಿಸುವ ಅಂತರಂಗದ ಘನತೆಯನ್ನರಿಯುವ ಸಿದ್ಧಿಗೆ ನಿರಂತರ ಸಾಧನೆ ಮುಖ್ಯ ಎಂದರು.
ಉದ್ಭವ ಪ್ರಕಾಶನದ ಡಾ. ಜೆ.ಪಿ. ಕೃಷ್ಣೇಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯವೇ ಮಾನವನ ದೊಡ್ಡ ಆಸ್ತಿ. ಅದಿದ್ದರೆ ಏನನ್ನಾದರೂ ಸಾಧಿಸಬಹುದು ಎಂದರು.
ಯುರೇಕಾ ಅಕಾಡೆಮಿಯ ದೀಪಕ್ ದೊಡ್ಡಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ದಾನಿ ಗೌರಮ್ಮ ಬಸವೇಗೌಡ, ಕೆ. ಮೋಹನ್, ಡಾ. ಸುಬ್ರಾಯ ಉಪಸ್ಥಿತರಿದ್ದರು. ಸಾಹಿತಿ ಬೆಳವಾಡಿ ಮಂಜುನಾಥ್ ಸ್ವಾಗತಿಸಿದರು. ರಮೇಶ್ ಬೊಂಗಾಳೆ ವಂದಿಸಿದರು. ಆಶಾಕಿರಣದ ಲಕ್ಷ್ಮಣಗೌಡ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement