ಇನಾಂ ಭೂಮಿ: ಪುನರ್ವಸತಿಗೆ ಒಪ್ಪಿಗೆ
ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸದ ಇನಾಂ ಭೂಮಿ ಒತ್ತುವರಿ ಮಾಡಿಕೊಂಡು ಕೃಷಿ ನಡೆಸುತ್ತಿರುವ ಸಣ್ಣ ಬೆಳೆಗಾರರಿಗೆ ಪುನರ್ವಸತಿ ಕಲ್ಪಿಸುವುದಾಗಿ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಇನಾಂ ಭೂಮಿ ಒತ್ತುವರಿ ತೆರವಿಗೆ ಹೆಚ್ಚಿನ ಕಾಲಾವಕಾಶ ಕೋರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಈ ಹೇಳಿಕೆ ನೀಡಿದ್ದಾರೆ.
ಇದನ್ನು ಪರಿಗಣಿಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಇಲ್ಲಿಯವರೆಗೆ ನಡೆಸಿರುವ ತೆರವು ಕಾರ್ಯಾಚರಣೆಯ ವಿವರ ನೀಡುವಂತೆ ಆದೇಶಿಸಿದೆ.
ಅರಣ್ಯ ಯಾವುದೇ ಪಕ್ಷಕ್ಕೆ ಸೇರಿಲ್ಲ: ಅರಣ್ಯ ಭೂಮಿ ರಕ್ಷಣೆ ಸರ್ಕಾರದ ಕರ್ತವ್ಯ. ಅದು ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ. ಅದು ದೇಶದ ಸಂಪತ್ತು. ಜೀವವೈವಿದ್ಯಗಳ ತಾಣ. ಅದರ ನಾಶ ಇಲ್ಲವೇ ಒತ್ತುವರಿ ಸಹಿಸಲಾಗದು. ಅದರ ತೆರವಿಗೆ ನೀವು ಕೂಡ ಆಸಕ್ತಿ ತೋರಿಸಿ ಎಂದು ಅಡ್ವೊಕೇಟ್ ಜನರಲ್ ಅವರಿಗೆ ಸಲಹೆ ನೀಡಿದ ಪೀಠ, ಮುಂದಿನ ಜನಾಂಗಕ್ಕೆ ನೀವು ಅರಣ್ಯ ರಕ್ಷಿಸಿದ ಸಾಹಸ ಕಥೆಗಳನ್ನು ಹೇಳಬಹುದು ಎಂದು ಚಟಾಕಿ ಹಾರಿಸಿತು.
ಆದೇಶ: ಕಳಸದ ಕಳಸೇಶ್ವರ ದೇಗುಲದ ವ್ಯಾಪ್ತಿಗೆ ಸೇರಿದ ಸುಮಾರು ಇನಾಂ ಭೂಮಿಯನ್ನು ಗ್ರಾಮಸ್ಥರು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ತೆರವುಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿ ಸಂಬಂಧ, ಒತ್ತುವರಿ ತೆರವುಗೊಳಿಸುವಂತೆ ನ್ಯಾಯಪೀಠ ಆದೇಶ ಹೊರಡಿಸಿತ್ತು. ಆದರೆ, ಇದಕ್ಕೆ ಕಾಲಾವಕಾಶ ಬೇಕು ಎಂದು ಕೋರಿ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.