ಕನ್ನಡ ಕಾವ್ಯಗಳಲ್ಲಿ ಮಹಿಳೆ ದೃಷ್ಟಿ-ಸೃಷ್ಟಿ ವಿಚಾರ ಸಂಕಿರಣ
ಶಿವಮೊಗ್ಗ: ಹಳೆಗನ್ನಡ ಕಾವ್ಯಗಳಲ್ಲಿ ಸ್ತ್ರೀ ಸಂವೇದನೆ ಯತೇಚ್ಛವಾಗಿ ಕಂಡು ಬಂದರೂ ಅದಕ್ಕೊಂದು ಆಧ್ಯಾತ್ಮಿಕ ಚೌಕಟ್ಟಿರುವುದನ್ನು ನಾವು ಗಮನಿಸುತ್ತೇವೆ. ಅಲ್ಲದೆ ಪುರುಷರೇ ಹೆಚ್ಚಾಗಿ ಕಾವ್ಯ ಬರೆದಿರುವುದರಿಂದ ಹೆಣ್ಣಿನ ಬಗ್ಗೆ ಒಂದು ರೀತಿಯ ಚೌಕಾಸಿ ಮಾಡಿಕೊಂಡೇ ಬಂದಿದ್ದಾರೆ. ಅಲ್ಲಿ ಹೆಣ್ಣಿನ ಅಪೇಕ್ಷೆಗಳು ಚೆಲ್ಲಾ-ಪಿಲ್ಲಿಯಾಗಿ ಭಿನ್ನ ನೆಲೆಗಳಲ್ಲಿ ಕಂಡು ಬರುತ್ತವೆ ಎಂದು ಡಿವಿಎಸ್ ಕಾಲೇಜಿನ ಉಪನ್ಯಾಸಕಿ ಡಾ. ಎ.ಎಸ್. ವತ್ಸಲಾ ಅಭಿಪ್ರಾಯಪಟ್ಟರು.
ಶುಕ್ರವಾರ ಬೆಳಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಲೇಖಕಿಯರ ಜಿಲ್ಲಾ ಸಂಘ, ಸಿರಿ ಸಾಹಿತ್ಯ ಸಂಘದ ಸಂಯುಕ್ತಾಶ್ರಯದಲ್ಲಿ ಕಮಲಾ ನೆಹರೂ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಕಾವ್ಯಗಳಲ್ಲಿ ಮಹಿಳೆ ದೃಷ್ಟಿ-ಸೃಷ್ಟಿ ಕುರಿತ ವಿಚಾರ ಸಂಕಿರಣದಲ್ಲಿ ಹಳೇಗನ್ನಡ ಕಾವ್ಯಗಳಲ್ಲಿ ಸ್ತ್ರೀ ಸಂವೇದನೆ ಕುರಿತು ಮಾತನಾಡಿದರು.
ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಸ್ತ್ರೀ ಸಂವೇದನೆ ಮುರುಟಿಹೋಗಿದೆ. ಅದಕ್ಕೆ ವರ್ತಮಾನದ ಹೊಸಸೃಷ್ಟಿ ನೀಡಬೇಕಾಗಿದೆ ಎಂದ ಅವರು,
ಹೆಣ್ಣಾಗುವುದು ಎಂದರೆ ಅಹಂಕಾರ ಕಳೆದುಕೊಳ್ಳುವುದು ಎಂದೇ ಅರ್ಥ. ಗಂಡು ಏನು ಮಾಡಿದರೂ ಹೆಣ್ಣಾಗಲು ಸಾಧ್ಯವೇ ಇಲ್ಲ ಆಕೆ ತನ್ಮಯತೆಂದ ತನ್ನ ಇಡೀ ಬದುಕನ್ನು ರೂಪಿಸಿಕೊಳ್ಳುತ್ತಲೇ ಪುರುಷನನ್ನು ಪ್ರಜ್ಞೆಯಡೆಗೆ ಕರೆದುಕೊಂಡು ಹೋಗುತ್ತಾಳೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷೆ ವಿಜಯಾ ಶ್ರೀಧರ್, ಪುರುಷರಲ್ಲಿ ಸ್ತ್ರೀ ಸಂವೇದನೆ ಸ್ತ್ರೀಯರಲ್ಲಿ ಪುರುಷ ಸಂವೇದನೆ ಇದ್ದಾಗ ಹೊಸತತ್ವ ಉಂಟಾಗುತ್ತದೆ. ಪ್ರಾಚೀನ ಕಾಲದಿಂದ ಇಂದಿನವರೆಗೂ ಕಾವ್ಯಗಳಲ್ಲಿ ಮಹಿಳೆಗೆ ಒಂದು ವಿಶಿಷ್ಟ ವ್ಯಕ್ತಿತ್ವ ಇದೆ. ಆಕೆ ತ್ಯಾಗಮುಯಾಗಿ ಕಂಡು ಬಂದರೂ ಕೂಡ ತನ್ನ ಕ್ಷಾತ್ರ ತೇಜಸ್ಸನ್ನು ಬಿಟ್ಟಿಲ್ಲ. ಹಾಗಾಗಿ ಅವಳು ಎಂದಿಗೂ ದಿಟ್ಟತನದಿಂದಲೇ ಇದ್ದಾಳೆ ಎಂದರು.
ಪ್ರಾಧ್ಯಾಪಕಿ ಪ್ರೊ. ಕಿರಣ್ ದೇಸಾಯಿ, ಡಾ. ಶುಭ ಮರವಂತೆ ಉಪನ್ಯಾಸ ನೀಡಿದರು. ಎಸ್.ವಿ. ಚಂದ್ರಕಲಾ ಅಧ್ಯಕ್ಷತೆ ವಹಿಸಿದ್ದರು. ಕುಮಾರ್ ಬೆಕ್ಕೇರಿ, ಕಮಲಾ ನೆಹರೂ ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣ ಮುಂತಾದವರು ಉಪಸ್ಥಿತರಿದ್ದರು.