ತಾರಸಿ ತೋಟಕ್ಕೆ ಮಹಿಳೆಯರು ಆದ್ಯತೆ ನೀಡಲಿ
ಚಿಕ್ಕಮಗಳೂರು: ನಮ್ಮ ಮನೆಯ ಕೈತೋಟಗಳಲ್ಲಿ ನಾವೆ ಸ್ವತಃ ಬೆಳೆದ ತರಕಾರಿಗಳನ್ನು ತಿಂದಾಗ ಸಿಗುವ ಆತ್ಮತೃಪ್ತಿ, ಮಾರ್ಕೆಟ್‌ನಿಂದ ಸಾವಿರ ರು. ಕೊಟ್ಟು ತಂದ ಯಾವ ಪದಾರ್ಥದಲ್ಲೂ ಸಿಗಲು ಸಾಧ್ಯವಿಲ್ಲ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಅನಿಲ್ ಸಬರದ್ ಹೇಳಿದ್ದಾರೆ.
ನಗರ ಹೊರವಲಯದ ಸಿಡಿಎ ಬಡಾವಣೆಯಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ನಗರ ಪ್ರದೇಶದಲ್ಲಿ ಕೈತೋಟಗಳು ಮಾಯವಾಗುತ್ತಿರುವ ಬಗ್ಗೆ ಮಹಿಳೆಯರು ಗಮನ ಹರಿಸಬೇಕು. ಜಾಗದ ಲಭ್ಯತೆ ಆಧಾರದಲ್ಲಿ ಹೂವುಗಳು ಸೇರಿದಂತೆ ಸೊಪ್ಪು, ತರಕಾರಿಗಳನ್ನು ನಮ್ಮ ಮನೆ ಅಂಗಳದ ಕೈತೋಟದಲ್ಲಿ ಬೆಳೆದು ರಾಸಾಯನಿಕ ಮುಕ್ತ ಆಹಾರ ಸೇವಿಸಿದಾಗ ತಾಜಾತನ, ಹಣ ಉಳಿಸುವ ಜತೆ ಪರಿಮಳಯುಕ್ತ ಪರಿಸರದಲ್ಲಿ ಜೀವಿಸಬಹುದು ಮತ್ತು ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು.
ಕೆಲವರು ತಾಂತ್ರಿಕ ಮಾಹಿತಿ ಆಧಾರದ ಮೇಲೆ ತಾರಸಿಯಲ್ಲಿ ತರಕಾರಿ ಮತ್ತು ವಿವಿಧ ಬೆಳೆ ಬೆಳೆಯುತ್ತಾರೆ. ಇಂದಿನ ಜೀವನಶೈಲಿ ಹಾಗಿಲ್ಲ. ಬೆಳಗ್ಗೆ ಮ್ಯಾಗಿ, ಮಧ್ಯಾಹ್ನ ಫಿಜ್ಜಾ, ರಾತ್ರಿ ಬರ್ಗರ್‌ಗೆ ಮಾರುಹೋಗಿ ನಮ್ಮ ಆರೋಗ್ಯವನ್ನು ನಾವೆ ಹಾಳು ಮಾಡಿಕೊಳ್ಳುತ್ತಿದ್ದೇವೆ. ಮಕ್ಕಳು ಬೆಳಗ್ಗೆ ಎದ್ದಾಗ ಟಿವಿ ಇಲ್ಲದೆ ಸಿರಿಲ್ಯಾಕ್ ತಿನ್ನೋದೆ ಇಲ್ಲ. ಮನೆ, ಮಂದಿ ಎಲ್ಲ ಮುಕ್ತ ಮುಕ್ತ ಎಂದು ಧಾರಾವಾಹಿಗೆ ಮುಗಿ ಬೀಳುತ್ತೇವೆ. ರಾತ್ರಿಯಾದರೆ ಕ್ರೈಂ ಸ್ಟೋರಿಯಲ್ಲಿ ಯಾರದ್ದೋ ಮರ್ಡರ್ ಸುದ್ದಿಗೆ ನಾವು ತಲೆಕೆಡಿಸಿಕೊಂಡು ಮಲಗುತ್ತೇವೆ. ಹೀಗೆ 24 ತಾಸುಗಳು ನಮ್ಮ ಸಮಯ ಹಾಳು ಮಾಡಿಕೊಳ್ಳುತ್ತಾ ಆರೋಗ್ಯದ ಕಡೆ ಗಮನ ನೀಡದೆ ಉದಾಸೀನತೆ ತೋರುತ್ತಿದ್ದೇವೆ. ಅಂದಾಜಿನ ಪ್ರಕಾರ ಮಕ್ಕಳು ದಿನಕ್ಕೆ 4 ಗಂಟೆ ಟಿವಿ ನೋಡಿದರೆ ಸಾಮಾನ್ಯನಿಗಿಂತ ಶೇ. 25 ರಷ್ಟು ಜ್ಞಾನ ಕ್ಷಿಣಿಸುತ್ತದೆ. 6 ಗಂಟೆಗೆ ಶೇ. 40, 8 ಗಂಟೆ ವೀಕ್ಷಿಸಿದರೆ ಶೇ. 75 ರಷ್ಟು ಜ್ಞಾನ ಕಮ್ಮಿಯಾಗುತ್ತದೆ ಎಂದರು.
ಓರ್ವ ಮನುಷ್ಯ ಆರೋಗ್ಯವಾಗಿರಲು ದಿನಕ್ಕೆ 100 ಗ್ರಾಂ ಸೊಪ್ಪು ಸೇರಿದಂತೆ 300 ಗ್ರಾಂ ತರಕಾರಿ, ಕನಿಷ್ಠ 250 ಗ್ರಾಂ ಹಣ್ಣು ಸೇವಿಸಬೇಕು. ಇದರಲ್ಲಿ ಕೇವಲ ಶೇ. 25ರಷ್ಟನ್ನು ಮಾತ್ರ ಪಾಲಿಸುತ್ತಿದ್ದೇವೆ. ಬಾಳೆಹಣ್ಣು ಬಿಟ್ಟರೆ ಬೇರಾವ ಹಣ್ಣು ಹೆಚ್ಚಾಗೆ ತಿನ್ನುವುದಿಲ್ಲ ಎಂದು ಹೇಳಿದರು.
ಕಬ್ಬಿಣದ ಅಂಶವಿರುವ ತರಕಾರಿಗಳನ್ನು ತಿನ್ನದೆ ಶೇ. 90 ರಷ್ಟು ಹೆಣ್ಣು ಮಕ್ಕಳಲ್ಲಿ ಹಿಮೋಗ್ಲೊಬಿನ್ ಕಮ್ಮಿ ಇದೆ. ಇದಕ್ಕೆ ಗಂಡುಮಕ್ಕಳು ಹೊರತಾಗಿಲ್ಲ. ಕರಿಬೇವು, ಖರ್ಜೂರ, ನುಗ್ಗೇಕಾಯಿಗಳಲ್ಲಿ ಕಬ್ಬಿಣದ ಅಂಶ ಹೆಚ್ಚಿದೆ. ಆದರೆ, ನಾವು ಅದನ್ನು ಬಳಸುವುದು ಕಡಿಮೆಯಾಗಿದೆ ಎಂದರು.
ಆರೋಗ್ಯವಂತ ಸಮಾಜ: ಸೊಪ್ಪು, ತರಕಾರಿಗಳ ಬೆಲೆ ಗಗನಕ್ಕೆರುತ್ತಿರುವ ಜತೆ ರಾಸಾಯನಿಕಯುಕ್ತವಾಗುತ್ತಿರುವುದರಿಂದ ಮನೆಗಳಲ್ಲಿ ತರಕಾರಿ ಬೆಳೆದು ಸೇವಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಹಕಾರಿ ಎಂದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರ್. ಸದಾನಂದ್ ಮಾತನಾಡಿ, ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನ ಕಾರ್ಯಕ್ರಮದಡಿ 250 ಮೊತ್ತದ ಗೊಬ್ಬರ, ವಿವಿಧ ಜಾತಿಯ ತರಕಾರಿ ಸಸಿಗಳು ಹಾಗೂ ಪರಿಕರಗಳನ್ನು ಇಲಾಖೆಯಿಂದ ಉಚಿತವಾಗಿ ನೀಡಿ ಕೈತೋಟಗಳ ಬೆಳವಣಿಗೆಗೆ ಸಹಕರಿಸಲಾಗುವ ವಿನೂತನ ಯೋಜನೆ ಇದೆ. ಮಹಿಳೆಯರು ಇದನ್ನು ಸದುಪಯೋಗಪಡಿಸಿಕೊಂಡು ಕೈತೋಟ ಮತ್ತು ತಾರಸಿ ತೋಟಗಳನ್ನು ಅಭಿವೃದ್ಧಿಪಡಿಸಿದರೆ ಉತ್ತಮ ಆರೋಗ್ಯದ ಜತೆ ಪರಿಸರಯುಕ್ತ ವಾತಾವರಣದಲ್ಲಿ ಜೀವಿಸಬಹುದು ಎಂದು ಹೇಳಿದರು.
ತೋಟಗಾರಿಖೆ ಉಪ ನಿರ್ದೇಶಕರಾದ ವೇದಮೂರ್ತಿ, ಬಿ.ಎನ್. ಪ್ರಸಾದ್, ಸಹಾಯಕ ತೋಟಗಾರಿಕೆ ಉಪ ನಿರ್ದೇಶಕಿ ಪೂರ್ಣಿಮಾ, ಕುಮಾರ್, ಪುನೀತ್ ಹಾಜರಿದ್ದರು.