ಬಡತನಕ್ಕೆ ಬೇಸತ್ತು ಮಕ್ಕಳಿಗೆ ವಿಷ ಕುಡಿಸಿ ತಾನೂ ವಿಷ ಕುಡಿದ ತಂದೆ
ಹಾಸನ: ಬಡತನದ ಬೇಗೆಯಿಂದ ತತ್ತರಿಸಿದ ವ್ಯಕ್ತಿಯೊಬ್ಬ ತನ್ನ ಎರಡು ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ, ತಾನೂ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
ಬೇಲೂರು ತಾಲೂಕಿನ ಅಂಬೇಡ್ಕರ್ ನಗರದ ನಂದೀಶ್ (32) ಎಂಬ ವ್ಯಕ್ತಿ ತನ್ನ ಮಕ್ಕಳಾದ ಪ್ರೇಕ್ಷಾ (6) ಮತ್ತು ನಿಶಾ (5)ಗೆ ವಿಷ ಕುಡಿಸಿ, ನಂತರ ತಾನೂ ವಿಷ ಕುಡಿದಿದ್ದಾನೆ. ತೀವ್ರ ಅಸ್ವಸ್ಥರಾಗಿರುವ ಮೂವರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನಂದೀಶ್ ಪೇಟರ್ ಕೆಲಸ ಮಾಡುತ್ತಿದ್ದು, ಪತ್ನಿ ಭಾಗ್ಯ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಿಂಗಳಿಗೊಮ್ಮೆ ಹಾನಸಕ್ಕೆ ಬಂದು ಕುಟುಂಬ ಸದಸ್ಯರನ್ನು ಭೇಟಿಯಾಗಿ ಹೋಗುತ್ತಿದ್ದರು. ಇತ್ತೀಚೆಗೆ ಆರ್ಥಿಕ ಸಮಸ್ಯೆ ತೀವ್ರವಾಗಿದ್ದರಿಂದ ನಂದೀಶ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.
ಶುಕ್ರವಾರ ನಗರದ ಮಹಾರಾಜ ಪಾರ್ಕ್ನಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ನಂದೀಶ್ ತನ್ನ ಇಬ್ಬರೂ ಮಕ್ಕಳಿಗೆ ವಿಷ ಕುಡಿಸಿ, ಬಳಿಕ ತಾನೂ ಸೇವಿಸಿದ್ದಾನೆ. ತೀವ್ರ ಅಸ್ವಸ್ಥರಾಗಿದ್ದ ಮೂವರನ್ನು ಗಮನಿಸಿದ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.