ಶಿವಲಿಂಗ ನೂತನ ತಹಸೀಲ್ದಾರ್
ಕೊಪ್ಪ: ತಾಲೂಕು ತಹಸೀಲ್ದಾರಾಗಿ ಕಳೆದೊಂದು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಶ್ರೀಧರ್ ಮೂರ್ತಿ ಎಸ್. ಪಂಡಿತ್ ಮಲ್ಲಾಪುರಕ್ಕೆ ವರ್ಗಾವಣೆಗೊಂಡಿದ್ದು, ನೂತನ ತಹಸೀಲ್ದಾರಾಗಿ ಸರ್ಕಾರದ ಅಧೀನ ಕಾರ್ಯದರ್ಶಿ ಶಿವಲಿಂಗ ನೇಮಕಗೊಂಡಿದ್ದಾರೆ. ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹಿರಿಯ ನಾಗರಿಕರಿಗೆ ಗುರುತಿನ ಚೀಟಿ
ನರಸಿಂಹರಾಜಪುರ: ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶದಂತೆ ತಾಲೂಕು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ನರಸಿಂಹರಾಜಪುರ ತಾಲೂಕಿನ 60ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರಿಂದ ಅರ್ಜಿ ಪಡೆದು ಅವರಿಗೆ ಗುರುತು ಚೀಟಿ ನೀಡಲು ಅನುಮತಿ ನೀಡಿರುತ್ತಾರೆ ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ. ಗಣಪತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ತಾಲೂಕು ವ್ಯಾಪ್ತಿಯ ಹಿರಿಯ ನಾಗರಿಕರು ಈ ಸೌಲಭ್ಯ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.
ಮಾಹಿತಿಗಾಗಿ ಮೊ. 9449659412, ಕಾರ್ಯದರ್ಶಿ ಮೊ. 9449687211 ಸಂಪರ್ಕಿಸಬಹುದು.
'ಗ್ರಾಮೀಣ ಪತ್ರಕರ್ತರಿಗೆ ಸೌಲಭ್ಯ ನೀಡಿ'
ನರಸಿಂಹರಾಜಪುರ: ಚಿಕ್ಕಮಗಳೂರು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಜಿಲ್ಲೆಯ ಗ್ರಾಮೀಣ ಪತ್ರಕರ್ತರಿಗೆ ವಿಶೇಷ ಸೌಲಭ್ಯ ನೀಡಬೇಕು ಎಂದು ಜಿಲ್ಲಾ ಪತ್ರಕರ್ತರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ರಾಜ್ಯ ವಾರ್ತಾ ಸಚಿವ ರೋಷನ್ ಬೇಗ್ ಅವರು ಇತ್ತೀಚೆಗೆ ತಾಲೂಕಿಗೆ ಆಗಮಿಸಿ ನೂತನವಾಗಿ ನಿರ್ಮಿಸಿದ್ದ ಪತ್ರಕರ್ತರ ಭವನ ಉದ್ಘಾಟಿಸಿದ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್ ಮನವಿ ಪತ್ರ ಅರ್ಪಿಸಿದರು.
ಆರೋಗ್ಯ ವಿಮೆ ಸೌಲಭ್ಯ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ನಕ್ಸಲ್ ಸಮಸ್ಯೆ ಸೇರಿದಂತೆ ಹಲವು ಗಂಭೀರ ಸಮಸ್ಯೆಳಿದ್ದು, ಜಿಲ್ಲೆಯ ಪತ್ರಕರ್ತರು ಹಗಲು, ರಾತ್ರಿ ಓಡಾಟ ಮಾಡಿ ಸುದ್ದಿ ಸಂಗ್ರಹ ಮಾಡುತ್ತಾರೆ. ಆದ್ದರಿಂದ ಜಿಲ್ಲೆಯ ಪತ್ರಕರ್ತರಿಗೆ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ವಿಮೆ ಸೌಲಭ್ಯ ಮಾಡಿಸಿಕೊಡಬೇಕು. ಸುದ್ದಿಗಾಗಿ ಓಡಾಡುವ ಪತ್ರಕರ್ತರಿಗೆ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.