ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮುಹೂರ್ತ

Rashmi Kasaragodu
Updated On : 10 Mar 2014, 11:40 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಮಾ.9
ಮೀಸಲಾತಿ ನಿಗದಿಯ ಗೊಂದಲದಿಂದಾಗಿ ಸುಮಾರು ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳ ಚುನಾವಣೆಗೆ ಇದೀಗ ಕಾಲ ಕೂಡಿ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ದಿನಾಂಕ ನಿಗದಿಪಡಿಸಲಾಗಿದೆ.
ಮಾ.13 ರಂದು ಕೊಪ್ಪ, ಶೃಂಗೇರಿ ಪಟ್ಟಣ ಪಂಚಾಯಿತಿ, ಬೀರೂರು ಪುರಸಭೆ, ಮಾ.14 ರಂದು ತರೀಕೆರೆ ಪುರಸಭೆ, ಮಾ. 15 ರಂದು ಎನ್.ಆರ್. ಪುರ, ಮೂಡಿಗೆರೆ ಪಟ್ಟಣ ಪಂಚಾಯಿತಿ, ಕಡೂರು ಪುರಸಭೆ ಹಾಗೂ ಚಿಕ್ಕಮಗಳೂರು ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಚಿಕ್ಕಮಗಳೂರು ನಗರಸಭೆ
ಚಿಕ್ಕಮಗಳೂರು ನಗರಸಭೆಯ ಗದ್ದುಗೆ ಏರಲು ಬಿಜೆಪಿಗೆ ಪೂರ್ಣ ಬಹುಮತ ಇದೆ. ಅಂದರೆ ಇಲ್ಲಿನ 35 ಸದಸ್ಯರ  ಪೈಕಿ ಬಿಜೆಪಿ 18, ಕಾಂಗ್ರೆಸ್ 10, ಜೆಡಿಎಸ್ 2 ಹಾಗೂ ಪಕ್ಷೇತರ 5 ಮಂದಿ ಸದಸ್ಯರು ಇದ್ದಾರೆ. ಬಿಜೆಪಿ ಹೊರತುಪಡಿಸಿ ಇನ್ನುಳಿದ ಪಕ್ಷಗಳು ಎಷ್ಟೇ ಕಸರತ್ತು ನಡೆಸಿದರೂ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವೇ ಇಲ್ಲ. ಬಿಜೆಪಿ 18 ಸದಸ್ಯರನ್ನು ಹೊಂದಿದ್ದು, ಇದರ ಜತೆಗೆ ಪಕ್ಷೇತರ ಕೆಲ ಸದಸ್ಯರ ಬೆಂಬಲವೂ ಈ ಪಕ್ಷಕ್ಕೆ ಇದೆ. ಅದುದರಿಂದ ಈ ಚುನಾವಣೆಯಲ್ಲಿ ಸುಲುಭವಾಗಿ ಅಧಿಕಾರದ ಗದ್ದುಗೆ ಏರಲಿದೆ.
ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ)ಕ್ಕೆ ಮೀಸಲಾಗಿದ್ದು, ಸಹಜವಾಗಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದೆ. ಕೆಲವು ಮಾಜಿ ಅಧ್ಯಕ್ಷರ ಜತೆಗೆ ಎರಡು ಬಾರಿ ನಗರಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಿದವ ಜತೆಗೆ ಹೊಸದಾಗಿ ಆಯ್ಕೆಯಾದ ಸದಸ್ಯರು ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿಗೆ ಇಳಿದಿದ್ದಾರೆ.
ಅಧಿಕಾರ ಹಂಚಿಕೆ: ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಇವರನ್ನು ಸಮಾಧಾನಪಡಿಸಲು ಬಿಜೆಪಿ ಅಧಿಕಾರ ಹಂಚಿಕೆಯ ಸೂತ್ರ ಪಾಲಿಸುವ ಸಾಧ್ಯತೆ ಹೆಚ್ಚಿದೆ. ಲೋಕಸಭಾ ಚುನಾವಣೆಗೂ ಮುನ್ನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಬಂದಿದ್ದರಿಂದ ಬಿಜೆಪಿ ಅತ್ಯಂತ ಸೂಕ್ಷ್ಮವಾಗಿ ಈ ಪರಿಸ್ಥಿತಿಯನ್ನು ನಿಭಾಯಿಸಲು ಯತ್ನಿಸುತ್ತಿದೆ.
ತರೀಕೆರೆ ಪುರಸಭೆ
ತರೀಕೆರೆ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮಾ. 14 ರಂದು ಚುನಾವಣೆ ನಡೆಯಲಿದೆ.
ಇಲ್ಲಿನ 23 ಸದಸ್ಯರ ಪೈಕಿ 10 ಮಂದಿ ಕಾಂಗ್ರೆಸ್, 9 ಮಂದಿ ಪಕ್ಷೇತರ, ಕೆಜೆಪಿ ಹಾಗೂ ಜೆಡಿಎಸ್ ತಲಾ 2 ಸದಸ್ಯರನ್ನು ಹೊಂದಿದೆ. ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳ ಪೈಕಿ ಅತಿ ಹೆಚ್ಚು ಪಕ್ಷೇತರ ಸದಸ್ಯರನ್ನು ಹೊಂದಿರುವ ಸ್ಥಳೀಯ ಸಂಸ್ಥೆ ಇದಾಗಿದೆ. ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ದಾರಿ ಸುಗಮವಾಗಿದೆ. ಪಕ್ಷೇತರರು, ಕೆಜೆಪಿ ಹಾಗೂ ಜೆಡಿಎಸ್ ಒಂದಾದರೆ ಕಾಂಗ್ರೆಸ್ ಪಕ್ಷದ ನಿದ್ದೆಗೆಡಿಸಬಹುದು.
ಬೀರೂರು ಪುರಸಭೆ
ಬೀರೂರು ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮಾ. 13 ರಂದು ಚುನಾವಣೆ ನಡೆಯಲಿದೆ. ಇಲ್ಲಿನ 23 ಸದಸ್ಯರ ಪೈಕಿ, ಕಾಂಗ್ರೆಸ್- 11, ಬಿಜೆಪಿ- 8, ಜೆಡಿಎಸ್- 2, ಕೆಜೆಪಿ- 1, ಪಕ್ಷೇತರ- 1 ಸದಸ್ಯರು ಇದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಯಾವುದೇ ಅಡಚಣೆ ಇಲ್ಲ.
ಕಾರಣ, ಸದಸ್ಯರ ಸಂಖ್ಯಾಬಲದಲ್ಲಿ ಎರಡನೇ ಸ್ಥಾನ ಹೊಂದಿರುವ ಬಿಜೆಪಿ, ಕೆಜೆಪಿ, ಪಕ್ಷೇತರ ಬೆಂಬಲ ತೆಗೆದುಕೊಂಡರೂ ಕಾಂಗ್ರೆಸ್ ಸದಸ್ಯರ ಸಂಖ್ಯಾಬಲ ದಾಟಲು ಸಾಧ್ಯವಿಲ್ಲ. ಇನ್ನುಳಿದಂತೆ ಜೆಡಿಎಸ್, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದು ಅಸಾಧ್ಯವಾದ ಮಾತು.
ಕಡೂರು ಪುರಸಭೆ
ಕಡೂರು ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮಾ. 15ರಂದು ಚುನಾವಣೆ ನಡೆಯಲಿದೆ. ಈ ಸ್ಥಳೀಯ ಸಂಸ್ಥೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಂಡಿದೆ. ಅಂದರೆ, ಇಲ್ಲಿನ 23 ಸದಸ್ಯರ ಪೈಕಿ, ಕಾಂಗ್ರೆಸ್- 13, ಜೆಡಿಎಸ್- 5, ಬಿಜೆಪಿ- 1, ಕೆಜೆಪಿ, ಪಕ್ಷೇತರ  ತಲಾ ಇಬ್ಬರು ಸದಸ್ಯರು ಇದ್ದಾರೆ. ಕಾಂಗ್ರೆಸ್ ಹೊರತುಪಡಿಸಿ, ಇತರೆ ಪಕ್ಷದವರು ಹಾಗೂ ಪಕ್ಷೇತರರು ಒಂದಾದರೂ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರುವುದನ್ನು ತಪ್ಪಿಸಲು ಸಾಧ್ಯವಿಲ್ಲ.
ಮೂಡಿಗೆರೆ ಪಟ್ಟಣ ಪಂಚಾಯ್ತಿ
ಮೂಡಿಗೆರೆ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮಾ. 15ರಂದು ಚುನಾವಣೆ ನಡೆಯಲಿದೆ.
ಇಲ್ಲಿರುವ 11 ಸದಸ್ಯರ ಪೈಕಿ ಬಿಜೆಪಿ- 5, ಕಾಂಗ್ರೆಸ್- 5 ಹಾಗೂ ಪಕ್ಷೇತರ ಓರ್ವ ಸದಸ್ಯರು ಇದ್ದಾರೆ. ಈ ಅಂಕಿಅಂಶ ನೋಡಿದರೆ ಅತಂತ್ರ ಪರಿಸ್ಥಿತಿ ಇದೆ. ಪಕ್ಷೇತರ ಸದಸ್ಯರ ಬೆಂಬಲ ಇಲ್ಲದೆ ಕಾಂಗ್ರೆಸ್ ಇಲ್ಲಿ ಅಧಿಕಾರಕ್ಕೆ ಬರಲು ಎಲ್ಲಾ ರೀತಿಯ ಅವಕಾಶ ಇದೆ. ವಿಧಾನಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರು ಸ್ಥಳೀಯ ಸಂಸ್ಥೆಗಳ ಸದಸ್ಯರು ಆಗಿರುವುದರಿಂದ ಅವರು ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡಬಹುದು. ಅದುದರಿಂದ ಮೂಡಿಗೆರೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುವುದು ಖಚಿತ.
ಎನ್.ಆರ್.ಪುರ ಪ.ಪಂ.
ನರಸಿಂಹರಾಜಪುರ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮಾ. 15ರಂದು ಚುನಾವಣೆ ನಡೆಯಲಿದೆ.
ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 11 ಮಂದಿ ಸದಸ್ಯರು ಇದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 4 ಸದಸ್ಯರನ್ನು ಹೊಂದಿದ್ದು, ಜೆಡಿಎಸ್- 2 ಹಾಗೂ ಪಕ್ಷೇತರ ಓರ್ವ ಸದಸ್ಯರು ಇದ್ದಾರೆ. ಸದ್ಯ ಸದಸ್ಯರ ಸಂಖ್ಯಾಬಲ ನೋಡಿದರೆ ಅತಂತ್ರ ಪರಿಸ್ಥಿತಿ ಕಂಡು ಬರುತ್ತಿದೆ. ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರ ತೀರ್ಮಾನದ ಮೇಲೆ ಇಲ್ಲಿನ ಅಧಿಕಾರ ಯಾವ ಪಕ್ಷಕ್ಕೆ ಎಂಬುದು ನಿರ್ಧಾರವಾಗಲಿದೆ.
ಕೊಪ್ಪ ಪಟ್ಟಣ ಪಂಚಾಯಿತಿ
ಕೊಪ್ಪ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮಾ. 13 ರಂದು ಚುನಾವಣೆ ನಡೆಯಲಿದ್ದು, ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ದಾರಿ ಸುಗಮವಾಗಿದೆ. ಇಲ್ಲಿನ 11 ಸದಸ್ಯರ ಪೈಕಿ ಬಿಜೆಪಿ- 6, ಕಾಂಗ್ರೆಸ್- 4 ಹಾಗೂ ಜೆಡಿಎಸ್- 1 ಸಂಖ್ಯಾಬಲ ಹೊಂದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗುವ ಕಸರತ್ತು ಮಾಡಿದರೂ ಅಧಿಕಾರಕ್ಕೆ ಬರುವುದು ಕನಸ್ಸಿನ ಮಾತು. ಇಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುವುದು ಖಚಿತ.
ಶೃಂಗೇರಿ ಪಟ್ಟಣ ಪಂಚಾಯಿತಿ
ಶೃಂಗೇರಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮಾ. 13ರಂದು ಚುನಾವಣೆ ನಡೆಯಲಿದ್ದು, ಇಲ್ಲಿನ ಎಲ್ಲಾ 11 ಸದಸ್ಯರು ಬಿಜೆಪಿಯವರೆ. ಬೇರೆ ಪಕ್ಷದವರು ಒಂದು ಸ್ಥಾನವನ್ನೂ ಪಡೆದುಕೊಂಡಿಲ್ಲ. ಅದುದರಿಂದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.



ಸ್ಥಳೀಯ ಸಂಸ್ಥೆಗಳ ಮೀಸಲಾತಿ ವಿವರ
ಸ್ಥಳೀಯ ಸಂಸ್ಥೆ    ಅಧ್ಯಕ್ಷರು        ಉಪಾಧ್ಯಕ್ಷರು
ಚಿಕ್ಕಮಗಳೂರು    ಸಾಮಾನ್ಯ         ಹಿಂದುಳಿದ ವರ್ಗ (ಎ)
ಬೀರೂರು        ಹಿಂದುಳಿದ ವರ್ಗ (ಬಿ)     ಮಹಿಳೆ ಪರಿಶಿಷ್ಟ ಜಾತಿ
ಎನ್.ಆರ್.ಪುರ    ಸಾಮಾನ್ಯ ಮಹಿಳೆ    ಹಿಂದುಳಿದ ವರ್ಗ (ಎ)
ಕೊಪ್ಪ           ಪರಿಶಿಷ್ಟ ಜಾತಿ ಮಹಿಳೆ    ಹಿಂದುಳಿದ ವರ್ಗ (ಎ )
ಕಡೂರು           ಸಾಮಾನ್ಯ ಮಹಿಳೆ    ಬಿಸಿಎಂ (ಎ)
ಶೃಂಗೇರಿ        ಹಿಂದುಳಿದ ವರ್ಗ (ಎ)    ಸಾಮಾನ್ಯ ಮಹಿಳೆ
ಮೂಡಿಗೆರೆ      ಪರಿಶಿಷ್ಟ ಜಾತಿ ಮಹಿಳೆ    ಸಾಮಾನ್ಯ
ತರೀಕೆರೆ        ಸಾಮಾನ್ಯ         ಸಾಮಾನ್ಯ ಮಹಿಳೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement