ಅರಣ್ಯ ಹಕ್ಕು ಕಾನೂನು ಸಮರ್ಪಕ ಜಾರಿಯಾಗಿಲ್ಲ
ಬಾಳೆಹೊನ್ನೂರು: ಅನುಸೂಚಿತ ಬುಡಕಟ್ಟುಗಳು ಮತ್ತಿತರ ಪಾರಂಪರಿಕ ಅರಣ್ಯ ವಾಸಿಗಳಿಗೆ ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ಅವರ ಸಮಸ್ಯೆಗಳ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಆದಿವಾಸಿ ಭೂಹಕ್ಕು ಆಂದೋಲನ ರಾಜ್ಯಾಧ್ಯಕ್ಷ ಕೆ.ಎನ್. ವಿಠ್ಠಲ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾನೂನು- 2006 ಸಮರ್ಪಕ ರೀತಿಯಲ್ಲಿ ಅನುಷ್ಠಾನವಾಗದೆ ಇರುವುದರಿಂದ ಮುಖ್ಯವಾಗಿ ವೈಯಕ್ತಿಕ ಮತ್ತು ಸಾಮುದಾಯಿಕ ಹಕ್ಕಿನ ಅರ್ಜಿಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ.
ಸ್ವೀಕರಿಸಲ್ಪಟ್ಟ ಕೆಲವು ಅರ್ಜಿಗಳಿಗೆ ಜಿಲ್ಲಾ ಅರಣ್ಯ ಹಕ್ಕು ಸಮಿತಿಯು 10 ಗುಂಟೆಯಿಂದ 1 ಎಕರೆ ಭೂಮಿ ನೀಡಿರುತ್ತದೆ. ಇದರಿಂದ ಆದಿವಾಸಿ ಸಮುದಾಯದ ಸಮಗ್ರ ಅಭಿವೃದ್ಧಿ ಅಸಾಧ್ಯ. ರಾಜಕೀಯ, ಉದ್ಯೋಗ, ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಹಕ್ಕಿನಿಂದ ವಂಚಿತರಾದ ಮೂಲ ನಿವಾಸಿಗಳಿಗೆ ಜನಸಂಖ್ಯಾವಾರು ಒಳ ಮೀಸಲಾತಿ ಜಾರಿಗೆ ತರಬೇಕು.
ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ವಾಸಿಸಿರುವ ಸುಮಾರು ಎರಡು ಸಾವಿರ ಆದಿವಾಸಿ ಕುಟುಂಬಗಳು ಇಂದಿಗೂ ಮಾಲೀಕರ ಕಾಫೀ ತೋಟದಲ್ಲಿ ಜೀತ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇಂತಹ ಕುಟುಂಬಕ್ಕೆ ಸರ್ಕಾರ ಮೂಲ ಸೌಕರ್ಯ ಒದಗಿಸಿಕೊಂಡುವುದರ ಜತೆಗೆ ಇವರಿಗೆ ವಾಸಿಸಲು ಸೂಕ್ತವಾದ ಸ್ಥಳದಲ್ಲಿ ಹೊಸ ಹಾಡಿ ರಚಿಸಬೇಕು. ಆದಿವಾಸಿಗಳನ್ನು ಅವರ ಮೂಲ ನೆಲೆಗಳಿಂದ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಆದಿವಾಸಿ ಸಮುದಾಯದ ಕೆಲವು ಕುಟುಂಬಗಳು ಹಲವಾರು ವರ್ಷದಿಂದ ಕಂದಾಯ ಭೂಮಿಯಲ್ಲಿ ಕೃಷಿ ಮಾಡಿಕೊಂಡು ವಾಸಿಸುತ್ತಿದ್ದು, ಅಂತಹ ಕುಟುಂಬಗಳಿಗೆ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತ್ಯೇಕ ಅನುದಾನ: ಮೂಲ ಅರಣ್ಯಾಧಾರಿತ ಆದಿವಾಸಿಗಳಿಗೆ ಆಯವ್ಯಯದಲ್ಲಿ ಪ್ರತ್ಯೇಕ ಅನುದಾನ ನಿಗದಿಪಡಿಸಬೇಕು. ಅರಣ್ಯ ಹಕ್ಕು ಕಾನೂನು 2006ರ ಪ್ರಕಾರ 3(1) ಒಕ್ಕಲೆಬ್ಬಿಸಿದ ಕುಟುಂಬಗಳು ಸ್ವ ಇಚ್ಛೆಯಿಂದ ಪುನಃ ಹಿಂದೆ ಇದ್ದ ವಾಸ ಸ್ಥಳಕ್ಕೆ ವಾಪಸ್ ಬರಲು ಹಕ್ಕನ್ನು ನೀಡಿದೆ. ಅದರಂತೆ ಡಿಸೆಂಬರ್ 2005ರ ಒಳಗೆ ಅರಣ್ಯದಲ್ಲಿ ವಾಸವಿದ್ದ ಯಾವುದೇ ಕುಟುಂಬವನ್ನು ಒಕ್ಕಲೆಬ್ಬಿಸಬಾರದು.
ಅರಣ್ಯಾಧಾರಿತ ಮೂಲ ನಿವಾಸಿಗಳ ಸಂವಿಧಾನಬದ್ಧವಾಗಿ ಜಾರಿಗೊಂಡ ರಾಜಕೀಯ, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಮೀಸಲಾತಿಯ ಸ್ಥಿತಿಗತಿಗಳು ಹಾಗೂ ಅಭಿವೃದ್ಧಿ ಕುರಿತು ಸಮೀಕ್ಷೆ ಮತ್ತು ವಾಸ್ತವ ಅಧ್ಯಯನ ನಡೆಸಿ ವರದಿ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.
ಆದಿವಾಸಿ ವಿವಿ: ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಹೊಸ ಶಿಕ್ಷಣ ನೀತಿ ರೂಪಿಸಬೇಕು. ಆದಿವಾಸಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ರಾಜ್ಯದ ಎಲ್ಲಾ ಆಶ್ರಮ ಪಾಠ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ಈಗಿರುವ ನವೋದಯ, ಏಕಲವ್ಯ, ಕಿತ್ತೂರು ಚೆನ್ನಮ್ಮ ವಸತಿ ಶಾಲೆಗಳ ಮಾದರಿಯಂತೆ ಆಶ್ರಮ ಪಾಠ ಶಾಲೆ ಮಾಡಬೇಕು. ಆದಿವಾಸಿಗಳಿಗೆ ಸರ್ಕಾರದ ಪ್ಯಾಕೇಜ್, ಆಮಿಷ, ಆಶ್ವಾಸನೆಗಳು ಬೇಡವಾಗಿದ್ದು, ಬದಲಿಗೆ ಆಹಾರ ಭದ್ರತೆ, ಸಾಮಾಜಿಕ ಭದ್ರತೆ ಖಾತ್ರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.